ಮಂಗಳೂರು : ನಗರದ ಆರ್‌ಡಬ್ಲ್ಯುಎ (RWA) ಸ್ಟೋರ್ ಸಮೀಪದ ಸುಂಕದಕಟ್ಟೆ ಪ್ರದೇಶದಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆಯಾಗದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ನೀರು ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚೆ ನಡೆಸಿದರು.
ಸ್ಥಳೀಯ ನಿವಾಸಿಗಳು ಮಾತನಾಡಿ, ನಿರಂತರ ಮಳೆಯಾಗುತ್ತಿದ್ದರೂ ಪ್ರದೇಶದಲ್ಲಿ ರೇಷನಿಂಗ್ ಪದ್ಧತಿಯಲ್ಲಿ ಮಾತ್ರ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಅದೂ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಮಾತ್ರ ನೀರು ಬರುತ್ತಿದೆ ಎಂದು ದೂರಿದರು. ನೀರಿನ ಒತ್ತಡ ಕಡಿಮೆ ಇರುವುದರಿಂದ ಅನೇಕ ಮನೆಗಳಿಗೆ ನೀರು ತಲುಪುತ್ತಿಲ್ಲ. ಉದ್ಯೋಗಕ್ಕೆ ತೆರಳುವವರು ಹಾಗೂ ಚಿಕ್ಕ ಮಕ್ಕಳಿರುವ ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸುತ್ತಿವೆ ಎಂದು ಅವರು ತಿಳಿಸಿದರು.
ಇದಲ್ಲದೆ, ಪೂರೈಕೆಯಾಗುತ್ತಿರುವ ನೀರಿನ ಗುಣಮಟ್ಟವೂ ತೃಪ್ತಿಕರವಾಗಿಲ್ಲ. ಬೋರ್‌ವೆಲ್ ನೀರನ್ನು ಪೂರೈಸುತ್ತಿರುವುದರಿಂದ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದರು.
ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಐವನ್ ಡಿ’ಸೋಜಾ ಅವರು, ಸುಂಕದಕಟ್ಟೆ ಪ್ರದೇಶದ ನಿವಾಸಿಗಳಿಗೆ ಸಾಧ್ಯವಾದಷ್ಟು 24 ಗಂಟೆಗಳ ನಿರಂತರ ಕುಡಿಯುವ ನೀರಿನ ಪೂರೈಕೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅಲ್ಲದೆ, ಅನೇಕ ಮನೆಗಳಲ್ಲಿ ನೀರು ಸಂಗ್ರಹಿಸಲು ಸಂಪ್ ಅಥವಾ ಟ್ಯಾಂಕ್ ವ್ಯವಸ್ಥೆ ಇಲ್ಲದಿರುವುದರಿಂದ ಬಡ ಹಾಗೂ ಅಗತ್ಯವಿರುವ ಕುಟುಂಬಗಳಿಗೆ ಸಿಂಟೆಕ್ಸ್ ನೀರಿನ ಟ್ಯಾಂಕ್‌ಗಳನ್ನು ವಿತರಿಸುವ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಶೀಘ್ರದಲ್ಲೇ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಐವನ್ ಡಿ’ಸೋಜಾ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಸ್ಥಳೀಯ ಮುಖಂಡ ಚೇತನ್ ಆರ್‌ಡಬ್ಲ್ಯುಎ ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

