ವರದಿ ರಾಯಿ ರಾಜ ಕುಮಾರ
ರಾಸಾಯನಿಕ ಬರೆತ ಆಹಾರವನ್ನು ಸೇವಿಸಿ ಕ್ಯಾನ್ಸರನ್ನು ಬೆಳೆಸುತ್ತಿದ್ದೇವೆ. ಜೀವ, ಜೀವನದ ಸಂಬಂಧ ಮಣ್ಣಿನಿಂದ ಮಾತ್ರ ಉಳಿಯಲು ಸಾಧ್ಯ. ಮನೆಯಲ್ಲಿಯೇ, ನಮ್ಮ ಗದ್ದೆಯಲ್ಲಿಯೇ, ಮನೆಯ ಗೊಬ್ಬರವನ್ನೇ ಹಾಕಿ ಬೆಳೆದ ಕಪ್ಪು ಕೆಂಪು ಅಕ್ಕಿಗಳು ಹೆಚ್ಚು ಪೋಷಕಾಂಶ ಯುಕ್ತವಾಗಿರುತ್ತವೆ. ಇಂತಹ ಪರಿಶುದ್ಧ ಆಹಾರದಿಂದ ಶುದ್ಧ ಮನಸ್ಸು, ಶುದ್ದ ದೇಹ, ಆರೋಗ್ಯವಂತ ಬದುಕು ಉಳಿಯಲು ಸಾಧ್ಯವಿದೆ. ಅದಕ್ಕಾಗಿ ಭೂಮಿಯನ್ನು ಪ್ರೀತಿಸಿ, ಮಣ್ಣಿನ ಬೆಲೆಯನ್ನು ಅರ್ಥ ಮಾಡಿಕೊಳ್ಳಿ ಎಂದು 1500ಕ್ಕೂ ಹೆಚ್ಚು ಅಳಿವಿನಂಚಿನ ಭತ್ತದ ಬೀಜಗಳನ್ನು ಸಂಗ್ರಹಿಸಿ ಬೆಳೆಸುತ್ತಿರುವ, ಕಾರ್ಕಳ ಪೆರ್ವಾಜೆ ಶಾಲೆಯ ಆಂಗ್ಲ ಅಧ್ಯಾಪಕಿ ಅಸ್ಮಾ ಬಾನು ತಮ್ಮ ದಿಕ್ಸೂಚಿ ಭಾಷಣದಲ್ಲಿ ಕೇಳಿಕೊಂಡರು.
ಅವರು ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ 109ನೇ ವರ್ಷದ ಸಹಕಾರ ಸಪ್ತಾಹ ಸಂಭ್ರಮದ ಗ್ರಾಮೀಣ ಅಭಿವೃದ್ಧಿ ದಿನಾಚರಣೆಯಲ್ಲಿ ಪರಿಸರ ಸಂರಕ್ಷಣೆ, ಕೃಷಿ ಪಶು ಸಂಗೋಪನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮಂಗಳೂರು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಕೆ ತಮ್ಮ ದಿಕ್ಸೂಚಿ ಭಾಷಣದಲ್ಲಿ ಕೃಷಿ ತಜ್ಞರ ಕೊರತೆಯನ್ನು ಒಪ್ಪಿಕೊಂಡು, ವಿದ್ಯಾರ್ಥಿಗಳು ಕೃಷಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿ ಕೃಷಿ ರಂಗದಲ್ಲಿ ತಜ್ಞತೆಯನ್ನು, ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಬೇಕೆಂದು ಕೇಳಿಕೊಂಡರು. ಮಕ್ಕಳು ಮಣ್ಣಿನ ಜೀವಂತಿಕೆಯನ್ನು ಪ್ರೀತಿಸಬೇಕೆಂದೂ ಆಶಿಸಿದರು.
ಮಳೆ ಕೊಯ್ಲಿಗೆ 6,000 ಸಹಾಯಧನ, ರೈತರಿಗೆ ಪ್ರೋತ್ಸಾಹ ಧನ, ಶೇಕಡ 25 ಡಿವಿಡೆಂಡ್, ನೂರು ಶೇಕಡ ಸಾಲ ವಸೂಲಾತಿ, ಇಂತಹ ಸಾವಯವ ಕೃಷಿಗೆ ಪ್ರೋತ್ಸಾಹಕರ ಉತ್ತೇಜನವನ್ನು ನೀಡುತ್ತಿರುವ ಸೊಸೈಟಿಯ ಕ್ರಮವನ್ನು ದ ಕ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಕೆ ಸುಚರಿತ ಶೆಟ್ಟಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಕ್ರಿಯ ಸಾಧಕ ರೈತರಾದ ದೊಡ್ಮನೆ ರಸ್ತೆಯ ಅಜಿತ್ ಕುಮಾರ್ ಜೈನ್, ಪ್ರಾಂತ್ಯ ಚಂದು ಭಂಡಾರಿ, ಗಾಂಧಿನಗರ ಪೌಲ್ ರೆಬೆಲ್ಲೋ, ಪಾದೆಮನೆ ಸುಂದರ ಪೂಜಾರಿ, ಎದುರು ಮನೆ ಜಗನ್ನಾಥ ಶೆಟ್ಟಿ, ಹೊಸಮನೆ ಸುರೇಂದ್ರ ಶೆಟ್ಟಿ, ಪೊನ್ನೆಚಾರಿ ಸರಸ್ವತಿ ಯವರನ್ನು ಸನ್ಮಾನಿಸಲಾಯಿತು. ಎರಡು ಗ್ರಾಮಗಳ ಶಾಲೆಗಳಲ್ಲಿ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ 63 ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಪ್ರಕೃತಿ, ಪ್ರಾಣಿಗಳ ತೊಂದರೆಗಳನ್ನು ನೆನಪಿಸಿಕೊಂಡು, ಕೃಷಿಗೆ ನಿಬಡ್ಡಿ ಸಾಲ ನೀಡುತ್ತಿರುವ ಸೊಸೈಟಿಯನ್ನು ಅಧ್ಯಕ್ಷತೆ ವಹಿಸಿದ್ದ ಕಾಶಿಪಟ್ನ ರಾಜು ಪೂಜಾರಿ ಅಭಿನಂದಿಸಿದರು.
ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಸ್ವಾಗತಿಸಿದರು. ಮಂಜುನಾಥ ಅಂಚನ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಚೇತನ್ ಹೆಗ್ಡೆ ಅತಿಥಿಗಳ ಪರಿಚಯ ಗೈದರು. ಗಣೇಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಸುದರ್ಶನ್ ಭಟ್ ವಂದಿಸಿದರು.
.

