ಇ-ಕೆವೈಸಿ ಕಡ್ಡಾಯ: ಬಯೋಮೆಟ್ರಿಕ್ ಅಪ್ಡೇಟ್ ಮಾಡದ ಮಹಿಳೆಯರ ಖಾತೆಗೆ ಹಣ ಜಮೆ ಸ್ಥಗಿತ ಸಾಧ್ಯ
ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ ಯೋಜನೆ’ಯ ಫಲಾನುಭವಿಗಳಿಗೆ ಇದೀಗ ಮಹತ್ವದ ಸೂಚನೆ ನೀಡಲಾಗಿದೆ. ಯೋಜನೆಯ ಪಾರದರ್ಶಕತೆ ಹೆಚ್ಚಿಸಲು ಹಾಗೂ ದುರ್ಬಳಕೆಯನ್ನು ತಡೆಯಲು ಸರ್ಕಾರ ಹೊಸ ನಿಯಮ ಜಾರಿಗೆ ತರಲು ಸಜ್ಜಾಗಿದೆ. ಇನ್ನುಮುಂದೆ ಯೋಜನೆಯ ಲಾಭ ಪಡೆಯುತ್ತಿರುವ ಪ್ರತಿಯೊಬ್ಬ ಮಹಿಳೆಯೂ ಕಡ್ಡಾಯವಾಗಿ ಇ-ಕೆವೈಸಿ ಹಾಗೂ ಬಯೋಮೆಟ್ರಿಕ್ ಪರಿಶೀಲನೆ ಪೂರ್ಣಗೊಳಿಸಬೇಕಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ತಿಂಗಳಿಗೆ ದೊರೆಯುವ ₹2000 ಹಣ ಖಾತೆಗೆ ಜಮೆಯಾಗುವುದು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಸರ್ಕಾರದ ಸಮೀಕ್ಷೆಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಮೃತಪಟ್ಟಿದ್ದರೂ, ಅವರ ಖಾತೆಗಳಿಗೆ ಇನ್ನೂ ಹಣ ಜಮೆಯಾಗುತ್ತಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಮೊದಲು ‘ಜೀವಿತ ಪ್ರಮಾಣ ಪತ್ರ’ ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆದಿದ್ದರೂ, ಸಾರ್ವಜನಿಕ ವಿರೋಧದ ಹಿನ್ನೆಲೆ ಇದೀಗ ‘ಒನ್ ಟೈಮ್ ಬಯೋಮೆಟ್ರಿಕ್’ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ.
ಈ ಹೊಸ ನಿಯಮದ ಪ್ರಕಾರ ಫಲಾನುಭವಿಗಳು ತಮ್ಮ ಮನೆ ಸಮೀಪದ ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ತೆರಳಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಪರಿಶೀಲನೆ ಮಾಡಿಸಬೇಕು. ಹೆಬ್ಬೆರಳಿನ ಗುರುತು ಅಥವಾ ಕಣ್ಣಿನ ಸ್ಕ್ಯಾನ್ ಮೂಲಕ ಗುರುತಿನ ದೃಢೀಕರಣ ನಡೆಯಲಿದೆ. ಜೊತೆಗೆ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಮರು ನೋಂದಣಿ ಮಾಡಿಸುವುದೂ ಕಡ್ಡಾಯವಾಗಲಿದೆ.
ರಾಜ್ಯ ಸರ್ಕಾರವು ಈ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದ್ದು, ಆದೇಶ ಪ್ರಕಟವಾದ ಬಳಿಕ ನಿಗದಿತ ಅವಧಿಯೊಳಗೆ ಎಲ್ಲಾ ಫಲಾನುಭವಿಗಳು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಯೋಜನೆಯ ದುರ್ಬಳಕೆಗೆ ತಡೆ ಒಡ್ಡಿ, ನಿಜವಾದ ಅರ್ಹ ಮಹಿಳೆಯರಿಗೆ ಮಾತ್ರ ಸರ್ಕಾರದ ಹಣ ತಲುಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

