ಕಟೀಲು : ಶ್ರೀ ಕ್ಷೇತ್ರ ಕಟೀಲು ದೇವಾಲಯದಲ್ಲಿ ನಡೆದ ತುಳುವರ್ಲ್ಡ್ ಫೌಂಡೇಶನ್‌ನ ಆಡಳಿತ ಮಂಡಳಿ ಸಭೆಯಲ್ಲಿ 2026–27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕಟೀಲಿನ ಶ್ರೀಹರಿನಾರಾಯಣ ದಾಸ ಅಸ್ರಣ್ಣ ಅವರು ವಹಿಸಿದ್ದರು. ತುಳುವರ್ಲ್ಡ್ ಫೌಂಡೇಶನ್‌ನ ನಿರ್ದೇಶಕರಾದ ಡಾ. ರಾಜೇಶ್ ಆಳ್ವ ಅವರು ಸಭೆಯನ್ನು ನಿರ್ವಹಿಸಿದರು.
ಸಭೆಯಲ್ಲಿ ಹರಿನಾರಾಯಣ ದಾಸ ಅಸ್ರಣ್ಣ ಅವರನ್ನು ಗೌರವ ಅಧ್ಯಕ್ಷರಾಗಿ, ಭಾನುಮತಿ ಶೆಟ್ಟಿ ಕಕ್ವಗುತ್ತು ಅವರನ್ನು ಅಧ್ಯಕ್ಷರಾಗಿ, ಪ್ರಮೋದ್ ಸಪ್ರೆ ಅವರನ್ನು ಪ್ರಧಾನ ಸಂಚಾಲಕರಾಗಿ, ವಸಂತ ರೈ ಕುತ್ತೆತ್ತೂರು ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಜಿ. ಕೆ. ಹರಿಪ್ರಸಾದ್ ರೈ ಅವರನ್ನು ಕಾರ್ಯದರ್ಶಿಯಾಗಿ, ಪ್ರವೀಣ್ ಕುಮಾರ್ ಕೋಡಿಯಾಲ್ ಬೈಲ್ ಹಾಗೂ ಜಯಪ್ರಕಾಶ್ ಪೂಜಾರಿ (ಮುಂಬೈ) ಅವರನ್ನು ಉಪಾಧ್ಯಕ್ಷರಾಗಿ, ಮತ್ತು ಚಂದ್ರಹಾಸ ದೇವಾಡಿಗ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು.
ನೂತನ ಆಡಳಿತ ಮಂಡಳಿಯು ತುಳುವರ್ಲ್ಡ್ ಫೌಂಡೇಶನ್‌ನ ಧ್ಯೇಯವಾಕ್ಯವಾದ “ತುಳುವ ಜಗದ ವಿಶ್ವರೂಪ”ವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ತುಳುನಾಡಿನ ನಾಗರಿಕತೆ, ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಯಕ್ಷಗಾನ, ಕಳರಿ, ದೈವಾರಾಧನೆ, ಜನಪದ ಪರಂಪರೆ, ತುಳುವ ಮಹಾಸಭೆ, ತುಳು ಡಿಜಿಟಲ್ ಗ್ರಂಥಾಲಯ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ಸಂಕಲ್ಪ ವ್ಯಕ್ತಪಡಿಸಿತು.
ಸಭೆಯಲ್ಲಿ ಸಂಸ್ಥೆಯ ಭವಿಷ್ಯದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಾರ್ಯಕ್ರಮಗಳು, ತುಳುವ ಮಹಾಸಭೆಯ ವಿಸ್ತರಣೆ, ತುಳು ಡಿಜಿಟಲ್ ಗ್ರಂಥಾಲಯ, ಸಾಂಸ್ಕೃತಿಕ ತರಬೇತಿ ಕಾರ್ಯಕ್ರಮಗಳು, ಯುವಜನರ ಭಾಗವಹಿಸುವಿಕೆ, ತುಳುನಾಡಿನ ಪರಂಪರೆಯ ದಾಖಲಾತಿ ಹಾಗೂ ಜಾಗತಿಕ ಮಟ್ಟದಲ್ಲಿ ತುಳು ಸಂಸ್ಕೃತಿಯ ಪರಿಚಯಕ್ಕೆ ಸಂಬಂಧಿಸಿದಂತೆ ವಿಸ್ತೃತ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಡಾ. ರವಿರಾಜ್ ಸುವರ್ಣ (ಮುಂಬೈ), ಅರವಿಂದ್ ಬೆಳ್ಚಾಡ, ಡಾ. ಅವಿನ್ ಆಳ್ವ, ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ (ಮುಂಬೈ), ಪ್ರಶಾಂತ್ ಶೆಟ್ಟಿ ಕಟ್ಟಿಂಗೇರಿ, ವಿನಯಾ ಆರ್. ಆಳ್ವ, ಪುನೀತ್ ಮುಂಡ್ಕೂರು, ಮನೋಹರ ರೈ, ಪ್ರಜ್ವಲ್ ಆಳ್ವ ಹಾಗೂ ಮಾಧವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದು.
ಸಭೆಯ ಅಂತ್ಯದಲ್ಲಿ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ತುಳುವರ್ಲ್ಡ್ ಫೌಂಡೇಶನ್‌ನ್ನು ವಿಶ್ವಮಟ್ಟದಲ್ಲಿ ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದರು.
“ತುಳುವ ಜಗದ ವಿಶ್ವರೂಪ” ಎಂಬ ಧ್ಯೇಯದೊಂದಿಗೆ ತುಳುವರ್ಲ್ಡ್ ಫೌಂಡೇಶನ್ ಮುಂದಿನ ದಿನಗಳಲ್ಲಿ ತುಳು ಭಾಷೆ, ಸಂಸ್ಕೃತಿ ಹಾಗೂ ನಾಗರಿಕತೆಯನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಪರಿಚಯಿಸುವ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಕೈಗೊಳ್ಳಲಿದೆ ಎಂದು ನೂತನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ತಿಳಿಸಿದರು.

