ಕೆಲಸದ ವೇಳೆ ವಿದ್ಯುತ್ ಆಘಾತ: ಯುವ ಕಾರ್ಮಿಕ ಜಯಪ್ರಕಾಶ್ ಸಾವು

0
1

ಉಪ್ಪಿನಂಗಡಿ : ಮರದ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕಣಿಯೂರಿನಲ್ಲಿ ಸಂಭವಿಸಿದೆ.

ಬಂದಾರು ನಿವಾಸಿ ಲಿಂಗಪ್ಪ ಗೌಡ ಅವರ ಪುತ್ರ ಜಯಪ್ರಕಾಶ್ (30) ಮೃತಪಟ್ಟ ಕಾರ್ಮಿಕ. ಪದ್ಮುಂಜದಲ್ಲಿರುವ ಮರದ ಮಿಲ್ಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

ಘಟನೆಯನ್ನು ಗಮನಿಸಿದ ಸಹ ಕಾರ್ಮಿಕರು ಹಾಗೂ ಸ್ಥಳೀಯರು ತಕ್ಷಣ ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಬೆಳ್ತಂಗಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಜಯಪ್ರಕಾಶ್ ಅವರ ಸ್ಥಿತಿ ಗಂಭೀರವಾಗಿತ್ತು. ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಮೃತರು ಪತ್ನಿ ಹಾಗೂ ಎಳೆಯ ವಯಸ್ಸಿನ ಮಗುವೊಂದನ್ನು ಅಗಲಿದ್ದಾರೆ. ಜಯಪ್ರಕಾಶ್ ಅವರ ಸಾವಿಗೆ ವಿದ್ಯುತ್ ಅವಘಡವೇ ಕಾರಣವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದು ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಖಚಿತವಾಗಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯಾಧಿಕಾರಿಗಳು ತೀರ್ಮಾನಿಸಿದ್ದಾರೆ.

ಘಟನೆಯ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದ್ಯುತ್ ಆಘಾತಕ್ಕೆ ಕಾರಣವೇನು ಹಾಗೂ ಮಿಲ್ಲಿನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆಯೂ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.