ಪಿಕಪ್ ವಾಹನದ ಹಿಂಭಾಗದಲ್ಲಿ ಮಕ್ಕಳ ಪ್ರಯಾಣ : ಪ್ರಕರಣ ದಾಖಲು

0
36

​ಉಡುಪಿ : ಗೂಡ್ಸ್ ಪಿಕಪ್ ವಾಹನವೊಂದರ ಹಿಂಭಾಗದಲ್ಲಿ 8 ರಿಂದ 10 ಜನ ಮಕ್ಕಳನ್ನು ನಿಲ್ಲಿಸಿಕೊಂಡು ಅಪಾಯಕಾರಿ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

​ಸೆಪ್ಟೆಂಬರ್ 10 ರಂದು ಸಂಜೆ 7:30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು-ಉಡುಪಿ ರಸ್ತೆಯ ಕಟಪಾಡಿ ಅಂಡರ್ ಪಾಸ್ ಬಳಿ ಈ ಘಟನೆ ನಡೆದಿದೆ.

ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ ‘KL 33 B 7463’ ನೋಂದಣಿಯ ಪಿಕಪ್ ವಾಹನದ ಚಾಲಕನು, ವಾಹನದ ಪರವಾನಗಿ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ, ಹಿಂಬದಿಯ ತೆರೆದ ಬಾಡಿಯಲ್ಲಿ ಮಕ್ಕಳನ್ನು ನಿಲ್ಲಿಸಿಕೊಂಡು ಕರೆದುಕೊಂಡು ಹೋಗುತ್ತಿದ್ದನು.

ಮಾನವ ಜೀವಕ್ಕೆ ಅಪಾಯ ತಂದೊಡ್ಡುವ ರೀತಿಯಲ್ಲಿ ಅತ್ಯಂತ ದುಡುಕುತನ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುತ್ತಿದ್ದ ಈ ದೃಶ್ಯಾವಳಿಗಳನ್ನು ಹಿಂಬದಿಯಲ್ಲಿ ಬರುತ್ತಿದ್ದ ಸಾರ್ವಜನಿಕರು ವೀಡಿಯೊ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿತ್ತು.

​ಇದನ್ನು ಗಮನಿಸಿದ ಕಾಪು ಪೊಲೀಸರು, ಸೆಪ್ಟೆಂಬರ್ 11 ರಂದು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಪಿಕಪ್ ವಾಹನವನ್ನು ಜಪ್ತಿ ಮಾಡಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.