ತಾಳಮದ್ದಳೆ ಸಪ್ತಾಹದಲ್ಲಿ ಸೂರಿಕುಮೇರು, ಶಂಭು ಶರ್ಮ ಸಂಸ್ಮರಣೆ

0
1

ಆಟ – ಕೂಟಗಳಲ್ಲಿ ರಂಜಿಸಿದ ಮೇರು ಕಲಾವಿದರು: ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು: ‘ರಂಗಸ್ಥಳದಲ್ಲಿ ಸರ್ವ ಸಮರ್ಥ ವೇಷಧಾರಿಗಳಾಗಿ ವಿಜ್ರಂಭಿಸಿದ ಕಲಾವಿದರು ತಾಳಮದ್ದಳೆ ವೇದಿಕೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ದಶಾವತಾರಿ ಗೋವಿಂದ ಭಟ್ಟರು ಯಕ್ಷಗಾನದ ಸರ್ವಾಂಗ ಸುಂದರ ವೇಷಧಾರಿಯಾಗಿರುವಂತೆ ಕಾವ್ಯಮಯವಾಗಿ ಮಾತಾಡುವ ಉತ್ತಮ ಅರ್ಥಧಾರಿಗಳೂ ಆಗಿದ್ದರು. ಎಪ್ಪತ್ತು ತಿರುಗಾಟಗಳನ್ನು ಪೂರೈಸಿದ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಮರಣೋತ್ತರ ಡಾಕ್ಟರೇಟ್ ನೀಡಿರುವುದು ಆ ಮಹಾನ್ ಕಲಾವಿದನಿಗೆ ಸಂದ ನಿಜವಾದ ಗೌರವ’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ| ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ನಗರದ ವಿವಿ ಕಾಲೇಜು ರವೀಂದ್ರ ಕಲಾಭವನದಲ್ಲಿ ನಡೆಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ 14ನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2026’ ಚತುರ್ದಶ ಸರಣಿಯ ನಾಲ್ಕನೇ ದಿನ ನ.25ರಂದು ನಡೆದ ಸಂಸ್ಮರಣ ಕಾರ್ಯಕ್ರಮದಲ್ಲಿ ಅವರು ಇತ್ತೀಚೆಗೆ ಅಗಲಿದ ಹಿರಿಯ ಯಕ್ಷಗಾನ ಕಲಾವಿದರು ಕೆ.ಗೋವಿಂದ ಭಟ್ ಸೂರಿಕುಮೇರು ಮತ್ತು ಶಂಭು ಶರ್ಮ ವಿಟ್ಲ ಅವರಿಗೆ ನುಡಿ ನಮನ ಸಲ್ಲಿಸಿ ಮಾತನಾಡಿದರು.

‘ವಿಟ್ಲ ಶಂಭುಶರ್ಮರು ಓರ್ವ ಅದ್ಭುತ ಮಾತುಗಾರ. ವಿಭಿನ್ನ ವರಸೆಯ ಅರ್ಥಗಾರಿಕೆಯಿಂದ ತಾಳಮದ್ದಳೆ ಕ್ಷೇತ್ರವನ್ನು ರಂಗೇರಿಸುತ್ತಿದ್ದ ಅವರು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾದ ಶರ್ಮರು ಉಪನ್ಯಾಸಕರಾಗಿ, ಅರ್ಥಧಾರಿಯಾಗಿ ಅಲ್ಲದೆ ವೃತ್ತಿ ಮೇಳದಲ್ಲಿ ವೇಷಧಾರಿಯಾಗಿಯೂ ಖ್ಯಾತಿ ಗಳಿಸಿದ್ದರು.ಅಗಲಿ ಹೋದ ಈರ್ವರೂ ಆಟ – ಕೂಟಗಳಲ್ಲಿ ಅಪಾರ ಯಕ್ಷ ಪ್ರೇಮಿಗಳನ್ನು ರಂಜಿಸಿದ ಮೇರು ಕಲಾವಿದರು’ ಎಂದವರು ಸ್ಮರಿಸಿದರು. ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಮಾಲಕರಾದ ರವೀಂದ್ರ ಶೇಟ್ ಸಂಸ್ಮರಣ ಜ್ಯೋತಿ ಬೆಳಗಿ ಸಪ್ತಾಹದ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.

ಕನ್ನಡದ ಕೈಂಕರ್ಯ

ಮುಖ್ಯ ಅತಿಥಿಗಳಾಗಿದ್ದ ಆತ್ಮ ಶಕ್ತಿ ವಿವಿಧೋದ್ದೇಶ ಸಹಕಾರಿ ಸೌಹಾರ್ದ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ ‘ಕಳೆದ ಹದಿಮೂರು ವರ್ಷಗಳಿಂದ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ಕನ್ನಡದ ನುಡಿ ಹಬ್ಬ ರೂಪದಲ್ಲಿ ನವೆಂಬರ್ ತಿಂಗಳಲ್ಲೇ ನಡೆಸುತ್ತಿರುವ ಯಕ್ಷಾಂಗಣದ ಕನ್ನಡದ ಕೈಂಕರ್ಯ ಇತರರಿಗೆ ಮಾದರಿಯಾಗಿದೆ. ಕನ್ನಡ ಭಾಷೆಯ ಶುದ್ಧ ಸ್ವರೂಪವನ್ನು ಯಕ್ಷಗಾನದ ಅರ್ಥಗಾರಿಕೆಯಲ್ಲಿ ಮಾತ್ರ ಕಾಣಲು ಸಾಧ್ಯ’ ಎಂದರು.

ರಂಗ ಕಲಾವಿದ ಹಾಗೂ ಉದ್ಯಮಿ ಲ|ಗಣೇಶ್ ಶೆಟ್ಟಿ ಅವರು ‘ಸಪ್ತಾಹದ ಪ್ರತಿದಿನ ಯಕ್ಷಗಾನ ತಾಳಮದ್ದಳೆಯೊಂದಿಗೆ ಗತಿಸಿದ ಕಲಾವಿದರನ್ನು ನೆನಪಿಟ್ಟು ಸಂಸ್ಮರಣ ಕಾರ್ಯಕ್ರಮಗಳ ಸರಣಿಯನ್ನೇ ನಡೆಸುತ್ತಿರುವುದು ಯಕ್ಷಾಂಗಣದ ಶ್ರೇಷ್ಠ ಕಾರ್ಯ’ ಎಂದು ಸಂಘಟಕರನ್ನು ಅಭಿನಂದಿಸಿದರು.

ಯಕ್ಷಾಂಗಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಪ್ರಾರ್ಥನೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಸುಮಾ ಪ್ರಸಾದ್ ವಂದಿಸಿದರು.ಸಮಿತಿಯ ಪ್ರಮುಖರಾದ ಕರುಣಾಕರ ಶೆಟ್ಟಿ ಪಣಿಯೂರು, ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ರವೀಂದ್ರ ರೈ ಕಲ್ಲಿಮಾರು, ಸುಧಾಕರ ರಾವ್ ಪೇಜಾವರ, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಸಿದ್ಧಾರ್ಥ ಅಜ್ರಿ ಉಪಸ್ಥಿತರಿದ್ದರು.

ತಾಳಮದ್ದಳೆ ‘ವಿಷ್ಣು ಮಾಯೆ’

ಸಮಾರಂಭದ ಬಳಿಕ ದ.ಕ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಅಂಬುರುವ ಯಕ್ಷ ಸದನ ಪ್ರತಿಷ್ಠಾನ ಬೊಟ್ಟಿಕೆರೆ ಇವರಿಂದ ‘ವಿಷ್ಣುಮಾಯೆ’ ಯಕ್ಷಗಾನ ತಾಳಮದ್ದಳೆ ಜರಗಿತು. ರಾಜಾರಾಮ ಹೊಳ್ಳ ಕೈರಂಗಳ , ಸ್ಕಂದ ಕೊನ್ನಾರ್, ಶೈವಿನ್ ಶೆಟ್ಟಿಗಾರ್ ಅವರ ಹಿಮ್ಮೇಳದಲ್ಲಿ ಸದಾಶಿವ ಆಳ್ವ ತಲಪಾಡಿ, ಗಣೇಶ ಕುಂಜತ್ತೂರು, ಗಣೇಶ್ ಕಾವ ಅಂಡಾಲಬೀಡು, ಬಾಲಕೃಷ್ಣ ಶೆಟ್ಟಿ ಎಕ್ಕೂರು, ನವೀನ್ ಇರಾ, ದೀವಿತ್ ಎಸ್.ಕೆ. ಪೆರಾಡಿ ಅರ್ಥಧಾರಿಗಳಾಗಿ ಭಾಗವಹಿಸಿದ್ದರು.