ಕಟೀಲು ಕ್ಷೇತ್ರದ ಅನನ್ಯ ಸೇವಕ ‘”ಪಾಂಡಣ್ಣ'” ಸರಳತೆಯ ಸಾಕಾರಮೂರ್ತಿ ಪಾಂಡುರಂಗ ಸಪ್ರೆ ಅವರಿಗೆ ಭಾವುಕ ನುಡಿನಮನ

0
1

ವರದಿ :-ಮಂದಾರ ರಾಜೇಶ್ ಭಟ್

​ಕಟೀಲು: “ಕಟೀಲು ಎಂದರೆ ನೆನಪಾಗುವುದು ಒಂದು ಅಸ್ತ್ರಣ್ಣ ಕುಟುಂಬ, ಮತ್ತೊಂದು ಪಾಂಡುರಂಗ ಸಪ್ರೆ!” ಹೌದು, ಸಮಯದ ಪರಿವೆ ಇಲ್ಲದೆ, ಹಗಲಿರಳು ದೇವಿಯ ಹಾಗೂ ಭಕ್ತ ಸಮೂಹದ ಸೇವೆಯಲ್ಲೇ ಬದುಕನ್ನು ಸವೆಸಿದ ಮಹಾನ್ ಮಾನವತಾವಾದಿ, ಸರಳ ಜೀವಿ ಪಾಂಡುರಂಗ ಸಪ್ರೆ (ಪಾಂಡಣ್ಣ) ಇವರ ಶ್ರದ್ಧಾಂಜಲಿ ಸಭೆಯಲ್ಲಿ ಮೂಡಿಬಂದ ಭಾವುಕ ನುಡಿಗಳಿವು.

​ವಿಠೋಬಾ ರುಕುಮಾಯಿ ದೇವಸ್ಥಾನದ ಸಭಾಮಂದಿರದಲ್ಲಿ ನಡೆದ ಸಭೆಯಲ್ಲಿ, ಸಮಾಜದ ವಿವಿಧ ರಂಗಗಳ ಗಣ್ಯರು ಪಾಂಡಣ್ಣ ಅವರೊಂದಿಗಿನ ತಮ್ಮ ಒಡನಾಟ ಹಾಗೂ ಅವರ ನಿಸ್ವಾರ್ಥ ಸೇವೆಯನ್ನು ನೆನೆದು ಕಣ್ಣಾಲಿಗಳನ್ನು ಒದ್ದೆ ಮಾಡಿಕೊಂಡರು.

​ಗಣ್ಯರ ನುಡಿನಮನ

​ಶ್ರೀ ಹರಿನಾರಾಯಣದಾಸ ಅಸ್ತ್ರಣ್ಣ ಕಟೀಲು-
​”ಪಾಂಡುರಂಗ ಸಪ್ರೆ ಅವರು ಕಟೀಲು ದೇವಿಯ ಪ್ರೀತಿಯ ಸೇವಕರಾಗಿದ್ದರು. ತಾನು ದುಡಿದ ಅಷ್ಟನ್ನೂ ಸಮಾಜಕ್ಕೆ ಅರ್ಪಿಸಿದ ಮಹಾನುಭಾವ ಅವರು. ಅತ್ಯುತ್ತಮ ಜ್ಞಾನಿ, ಸರಳ ಜೀವಿ ಹಾಗೂ ಸದಾ ನಗುಮುಖದ ಪಾಂಡಣ್ಣ ನನಗೆ ಗುರುಗಳ ಸಮಾನರಾಗಿದ್ದರು.” ಎಂದರು

​ಹರಿದಾಸ ಚಂದ್ರಶೇಖರ ಭಟ್ ಪುತ್ತಿಗೆ-
“ಪಾಂಡುರಂಗ ಸಪ್ರೆ ಅವರು ಅಪಾರ ಜನಾನುರಾಗಿಯಾಗಿದ್ದರು, ಎಲ್ಲರಿಗೂ ಒಳ್ಳೆಯ ಮಾರ್ಗದರ್ಶಕರಾಗಿದ್ದರು. ಕಷ್ಟದಲ್ಲಿದ್ದ ಅದೆಷ್ಟೋ ಜನರಿಗಾಗಿ ಅವರು ಖುದ್ದಾಗಿ ದೇವಿಯ ಮುಂದೆ ನಿಂತು ಕಷ್ಟ ಪರಿಹರಿಸುವಂತೆ ಪ್ರಾರ್ಥಿಸುತ್ತಿದ್ದರು ಎಂಬುದನ್ನು ನಾನು ನನ್ನ ಸ್ವಂತ ಅನುಭವದಿಂದ ತಿಳಿದುಕೊಂಡಿದ್ದೇನೆ.”

​ಏರ್ಪಲೆ ಸುಬ್ರಹ್ಮಣ್ಯ ಭಟ್-

“ವಿಠೋಬಾ ರುಕುಮಾಯಿ ದೇವಸ್ಥಾನದ ಅಧ್ಯಕ್ಷರಾಗಿ, ದೇವಸ್ಥಾನದ ಭಕ್ತರಾಗಿ ಇಡೀ ಸಮಾಜವನ್ನು ಮುನ್ನಡೆಸಿದ ಹಿರಿಯರು ನಮ್ಮ ಪಾಂಡುರಂಗ ಸಪ್ರೆ.”

​ಕೆ. ಆರ್. ಪಂಡಿತ್-

“ಕಟೀಲು ದೇವಿಯ ದರ್ಶನಕ್ಕಾಗಿ ನಾವು ಅದೆಷ್ಟೋ ಜನರನ್ನು ಕಳುಹಿಸಿಕೊಡುತ್ತಿದ್ದೆವು. ಬಂದವರೆಲ್ಲರಿಗೂ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಒಬ್ಬ ಸಂಪೂರ್ಣ ವ್ಯಕ್ತಿ ಎಂದರೆ ಅದು ಪಾಂಡಣ್ಣ.”

​ಪಾಂಡಣ್ಣ ನೆನಪು ಅಜರಾಮರವಾಗಿಸಲು ಮಹತ್ವದ ಕರೆ

​ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ಮಂದಾರ ರಾಜೇಶ್ ಭಟ್, ಪಾಂಡಣ್ಣ ಅವರ ನೆನಪನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಪ್ರಸ್ತಾಪವನ್ನು ಮುಂದಿಟ್ಟರು

​”ಪಾಂಡುರಂಗನ ಸನ್ನಿಧಿಯಲ್ಲಿ, ಈ ಪಾಂಡುರಂಗ ಸಭಾಮಂದಿರದಲ್ಲಿ ಪಾಂಡುರಂಗ ಸಪ್ರೆ ಇವರ ನೆನಪಿಗಾಗಿ, ಕಷ್ಟದಲ್ಲಿರುವ ಸಮಾಜ ಬಾಂಧವರ ಕಣ್ಣೀರು ಒರೆಸಲು ಒಂದು ಒಳ್ಳೆಯ ಜನಪರ ಯೋಜನೆಯನ್ನು ಹಾಕಿಕೊಳ್ಳಬೇಕಿದೆ. ಆ ಮುಖಾಂತರ ಪಾಂಡಣ್ಣ ಅವರ ನೆನಪು ಅಜರಾಮರವಾಗಿ ಉಳಿಯುವಂತೆ ಮಾಡಬೇಕಾಗಿದೆ. ಸಮಾಜದ ಎಲ್ಲರೂ ಇದರ ಬಗ್ಗೆ ಗಂಭೀರವಾಗಿ ಯೋಚಿಸೋಣ.” ಎಂದರು

​ವೇದಿಕೆಯ ಉಪಸ್ಥಿತಿ ಮತ್ತು ನಿರ್ವಹಣೆ

​ಈ ಭಾವುಕ ಶ್ರದ್ಧಾಂಜಲಿ ಸಭೆಯ ವೇದಿಕೆಯಲ್ಲಿ ಕಟೀಲು ಹರಿನಾರಾಯಣ ಅಸ್ತ್ರಣ್ಣ, ಹರಿದಾಸ ಚಂದ್ರಶೇಖರ ಭಟ್, ರಾಮಚಂದ್ರ ಭಟ್ ಕುಕ್ಕುಡೇಲು ಹಾಗೂ ರಮೇಶ್ ಭಟ್ ಏರ್ಪಲೆ ಉಪಸ್ಥಿತರಿದ್ದು ಪ್ರಭಾಂಗಣದಲ್ಲಿ ಸೇರಿದ ಎಲ್ಲರೂ ಮೃತರ ಶಾಂತಿ ಕೋರಿದರು.
​ಇಡೀ ಕಾರ್ಯಕ್ರಮದ ಶ್ರದ್ಧಾಂಜಲಿ ಸಭೆಯ ನಿರೂಪಣೆಯನ್ನು ಲಕ್ಷ್ಮಿಕಾಂತ ಪರಾಡ್ಕರ್ ಅವರು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಗಂಭೀರವಾಗಿ ನೆರವೇರಿಸಿಕೊಟ್ಟರು.

​”ಬದುಕಿನ ಗಳಿಕೆಯನ್ನು ಕೇವಲ ತನಗಾಗಿ ಬಳಸದೇ, ಸಮಾಜದ ಕಷ್ಟಗಳಿಗೆ ಸ್ಪಂದಿಸುತ್ತಾ, ನಗುಮುಖದಿಂದಲೇ ಎಲ್ಲರ ಹೃದಯ ಗೆದ್ದ ಪಾಂಡುರಂಗ ಸಪ್ರೆ ಅವರ ಜೀವನ ನಮಗೆಲ್ಲರಿಗೂ ಆದರ್ಶ. ಮನುಷ್ಯ ಬದುಕಿದ್ದಾಗ ಎಷ್ಟು ಸಂಪಾದಿಸಿದ ಎನ್ನುವುದಕ್ಕಿಂತ, ಹೋದ ಮೇಲೆಯೂ ಜನರ ಮನಸ್ಸಿನಲ್ಲಿ ಎಷ್ಟು ಪ್ರೀತಿ ಸಂಪಾದಿಸಿದ ಎನ್ನುವುದು ಮುಖ್ಯವಾಗುತ್ತದೆ. ಪಾಂಡಣ್ಣ ಅವರಂತೆ ನಿಸ್ವಾರ್ಥ ಸೇವೆ ಹಾಗೂ ಸರಳತೆಯನ್ನು ನಮ್ಮದಾಗಿಸಿಕೊಂಡು, ಕಷ್ಟದಲ್ಲಿರುವ ಸಮಾಜದ ಬಂಧುಗಳಿಗೆ ಹೆಗಲಾಗುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.”

LEAVE A REPLY

Please enter your comment!
Please enter your name here