ಪ್ರತಿಯೊಂದು ಮಗುವಿನಲ್ಲೂ ಅಡಗಿವೆ ವಿಭಿನ್ನ ಪ್ರತಿಭೆಗಳು : ಆತ್ಮವಿಶ್ವಾಸದ ಪಾಠ ಬೋಧಿಸಿದ ಮರಿಮಾಯಂ ಉಣ್ಣಿರಾಜ

0
6

ವಿದ್ಯಾರ್ಥಿಗಳ ಸಂಭ್ರಮದ ಸ್ವಾಗತದ ನಡುವೆ ಶತಮಾನೋತ್ಸವ ಲೋಗೋ ಅನಾವರಣ; ಆಚರಣೆಯ ವಿವಿಧ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ಭರವಸೆ

ಬದಿಯಡ್ಕ : ಪ್ರತಿಯೊಂದು ಮಗುವಿನಲ್ಲೂ ವಿಭಿನ್ನ ಪ್ರತಿಭೆಗಳು ಅಡಗಿದ್ದು, ಅವುಗಳನ್ನು ಗುರುತಿಸಿ ಬೆಳೆಸುವ ಕೆಲಸವಾಗಬೇಕು ಎಂದು ಖ್ಯಾತ ಕಲಾವಿದ ಹಾಗೂ ನಟ ಮರಿಮಾಯಂ ಉಣ್ಣಿರಾಜ ಹೇಳಿದರು. ಜಿ.ಎಚ್.ಎಸ್. ಪೆರಡಾಲ ಶಾಲೆಯ ಶತಮಾನೋತ್ಸವದ ಲೋಗೋ ಅನಾವರಣಗೊಳಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಉತ್ಸಾಹಭರಿತ ಸ್ವಾಗತ ಹಾಗೂ ಸಂಘಟಕರ ಗೌರವವನ್ನು ಸ್ವೀಕರಿಸಿದ ಉಣ್ಣಿರಾಜ ಅವರು ಶಾಲೆಯಲ್ಲಿ ಸಾಕಷ್ಟು ಸಮಯ ಕಳೆದ ಬಳಿಕವೇ ಹಿಂದಿರುಗಿದರು. 2026ರ ಡಿಸೆಂಬರ್‌ನಲ್ಲಿ ಆರಂಭಗೊಂಡು 2027ರ ಏಪ್ರಿಲ್ ಮೊದಲ ವಾರದಲ್ಲಿ ಸಮಾಪನಗೊಳ್ಳಲಿರುವ ಶತಮಾನೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ತಾನೂ ಭಾಗವಹಿಸುವುದಾಗಿ ಭರವಸೆ ನೀಡಿ ಅವರು ನಿರ್ಗಮಿಸಿದರು.

ವಿದ್ಯಾರ್ಥಿಗಳು ತಮ್ಮ ಕೈಯಾರೆ ಬಿಡಿಸಿದ ಉಣ್ಣಿರಾಜ ಅವರ ಚಿತ್ರಗಳನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದು ಕಾರ್ಯಕ್ರಮದ ವಿಶೇಷ ಕ್ಷಣವಾಗಿತ್ತು. ತುಳುನಾಡಿನ ವಿಶಿಷ್ಟ ಭಾಷಾಶೈಲಿ ಹಾಗೂ ಗ್ರಾಮೀಣ ಹಿನ್ನೆಲೆ ತನ್ನನ್ನು ಹೆಚ್ಚು ಆಕರ್ಷಿಸುತ್ತದೆ ಎಂದು ಲೋಗೋ ಅನಾವರಣದ ಬಳಿಕ ಮಾತನಾಡಿದ ಅವರು ಹೇಳಿದರು.
ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡ ಉಣ್ಣಿರಾಜ ಅವರು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಮಹತ್ವದ ಪಾಠ ಬೋಧಿಸಿದರು. ಶಾಲಾ ದಿನಗಳಲ್ಲಿ ಕೇವಲ 20 ರೂಪಾಯಿಯನ್ನೂ ಖರ್ಚು ಮಾಡಿ ಪ್ರವಾಸಕ್ಕೆ ಹೋಗಲು ಸಾಧ್ಯವಾಗದೆ ತರಗತಿಯಲ್ಲಿ ಕೈ ಕೆಳಗೆ ಹಾಕಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದ್ದ ಘಟನೆಯನ್ನು ಅವರು ಸ್ಮರಿಸಿದರು. ಆದರೆ ಕಲಾರಂಗಕ್ಕೆ ಆತ್ಮವಿಶ್ವಾಸದಿಂದ ಪ್ರವೇಶಿಸಿ ನಿರಂತರವಾಗಿ ಕೆಲಸ ಮಾಡಿದ ಪರಿಣಾಮ ಇಂದು ಜಗತ್ತಿನ ವಿವಿಧ ಭಾಗಗಳಿಗೆ ತೆರಳಲು ಸಾಧ್ಯವಾಗಿದೆ ಎಂದು ಹೇಳಿದರು.

ಯಾವುದೇ ವಿದ್ಯಾರ್ಥಿಯೂ ತನ್ನಲ್ಲಿ ಪ್ರತಿಭೆಯಿಲ್ಲ ಎಂದು ಭಾವಿಸಬಾರದು. ಪ್ರತಿಯೊಂದು ಮಗುವಿನಲ್ಲೂ ವಿಭಿನ್ನ ಸಾಮರ್ಥ್ಯಗಳಿವೆ. ಅವುಗಳನ್ನು ಗುರುತಿಸಿ ಬೆಳೆಸಿಕೊಳ್ಳಬೇಕು ಎಂಬ ಅವರ ಮಾತುಗಳು ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾದವು.

ಕಾಸರಗೋಡಿನ ವಿಶಿಷ್ಟ ಭಾಷಾಶೈಲಿಯ ಬಗ್ಗೆಯೂ ಅವರು ಮಾತನಾಡಿದರು. ಬದಿಯಡ್ಕ, ಬೇಡಡ್ಕ, ಬಂಟಡ್ಕ, ಮರುತಡ್ಕ ಮೊದಲಾದ ಸ್ಥಳನಾಮಗಳನ್ನು ಬಸ್ ಸಿಬ್ಬಂದಿ ಉಚ್ಚರಿಸುವ ಕಾಸರಗೋಡಿನ ಭಾಷೆಯ ಸೊಗಡನ್ನು ತಮ್ಮ ಆರಂಭಿಕ ನಾಟಕಗಳ ಸಂಭಾಷಣೆಗಳಲ್ಲಿಯೂ ಅಳವಡಿಸಿಕೊಂಡಿದ್ದಾಗಿ ತಿಳಿಸಿದರು. ತಾನು ಕಾಸರಗೋಡು ಜಿಲ್ಲೆಯ ಚೇರುವತ್ತೂರು ಮೂಲದವನಾಗಿದ್ದರೂ ಕಾಸರಗೋಡಿನ ಭಾಷೆಯ ಸೊಗಡು ಮತ್ತು ಸೌಂದರ್ಯವನ್ನು ಸದಾ ಇಷ್ಟಪಡುತ್ತೇನೆ ಎಂದರು.

ಶುದ್ಧ ಭಾಷೆಗಿಂತ ಸ್ಥಳೀಯ ಭಾಷೆಯ ವೈಶಿಷ್ಟ್ಯವನ್ನು ಕಲಾರಂಗದಲ್ಲಿ ಬಳಸಿದಾಗ ಪಾತ್ರಗಳು ಹೆಚ್ಚು ಸಹಜವಾಗಿ ಮೂಡಿಬರುತ್ತವೆ ಎಂದು ಅಭಿಪ್ರಾಯಪಟ್ಟರು. ಕಾಸರಗೋಡಿನ ಭಾಷಾಶೈಲಿಯ ಸಂಭಾಷಣೆಗಳೇ ಪ್ರೇಕ್ಷಕರ ನಡುವೆ ತನ್ನನ್ನು ಗುರುತಿಸುವಂತೆ ಮಾಡಿವೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕೇರಳ ಮುಖ್ಯಮಂತ್ರಿಯವರಿಂದಲೇ ‘ಕಾಸರಗೋಡಿನ ಉಣ್ಣಿ’ ಎಂಬ ವಿಶೇಷಣ ಕೇಳಲು ಸಾಧ್ಯವಾಗಿದ್ದು ಸಂತಸ ತಂದಿದೆ ಎಂದು ಅವರು ಹಂಚಿಕೊಂಡರು.

ಉಣ್ಣಿರಾಜ ಅವರ ಅನುಭವ ಹಾಗೂ ಮಾತುಗಳನ್ನು ಆಲಿಸುತ್ತಿದ್ದ ಸಭಿಕರಿಂದ ಅವರ ಅಭಿನಯ ಮತ್ತು ಸಂಭಾಷಣೆಗಳನ್ನು ನೇರವಾಗಿ ನೋಡಬೇಕೆಂಬ ಬೇಡಿಕೆ ವ್ಯಕ್ತವಾಯಿತು. ಬಳಿಕ ತಮ್ಮದೇ ವಿಶಿಷ್ಟ ಅಭಿನಯಶೈಲಿ ಹಾಗೂ ಕಾಸರಗೋಡಿನ ಭಾಷೆಯ ಸೊಗಡಿನೊಂದಿಗೆ ಸಂಭಾಷಣೆಗಳನ್ನು ಪ್ರಸ್ತುತಪಡಿಸಿದಾಗ ಸಭಿಕರು ಉತ್ಸಾಹದಿಂದ ಸ್ವಾಗತಿಸಿದರು.

ಸಂಜೆಯ ವೇಳೆ ಶಾಲಾ ಆವರಣದ ನೆರಳುಮರದ ಕೆಳಗೆ ಸಿದ್ಧಪಡಿಸಿದ್ದ ವೇದಿಕೆ ಮತ್ತು ಸಭಾಂಗಣ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಶಾಲೆಯ ಹಳೆಯ ಕಟ್ಟಡ, ಪಾರ್ಕ್ ಹಾಗೂ ಆಟದ ಮೈದಾನಗಳು ತಾನು ಕಲಿತ ಊರಿನ ಸರ್ಕಾರಿ ಶಾಲೆಯನ್ನು ನೆನಪಿಸುತ್ತವೆ ಎಂದು ಉಣ್ಣಿರಾಜ ಹೇಳಿದರು.

ಕಲೆ, ಜೀವನಾನುಭವ ಹಾಗೂ ಹಾಸ್ಯ ಮಿಶ್ರಿತ ಅವರ ಉಪಸ್ಥಿತಿಯು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಘಟಕರಿಗೆ ಸ್ಮರಣೀಯ ಅನುಭವವಾಯಿತು. ಕೊನೆಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಬಂದ ಎಲ್ಲರಿಗೂ ಸಮಯ ನೀಡಿ, ಆತ್ಮೀಯತೆ ಹಂಚಿಕೊಂಡ ಬಳಿಕ ಶತಮಾನೋತ್ಸವ ಲೋಗೋ ಅನಾವರಣ ವೇದಿಕೆಯಿಂದ ಅವರು ನಿರ್ಗಮಿಸಿದರು.
ಲೋಗೋ ಅನಾವರಣ ಸಮಾರಂಭದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರೂ ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷರೂ ಆದ ಡಿ. ಶಂಕರ ವಹಿಸಿದ್ದರು. ಪ್ರಧಾನ ಸಂಚಾಲಕ ಮಾಹಿನ್ ಕೇಳೋಟ್ ಸ್ವಾಗತಿಸಿದರು.

ಜನಪ್ರತಿನಿಧಿಗಳಾದ ಹಮೀದ್ ಕೇಡಂಜಿ, ಶಾಲೆಯ ಮುಖ್ಯಶಿಕ್ಷಕಿ ಸೌರಭ, ರಾಮಪ್ಪ ಮಂಜೇಶ್ವರ, ಅವಿನಾಶ್ ರೈ, ಶ್ಯಾಮ್ ಪ್ರಸಾದ್ ಮಾನ್ಯ, ಶ್ಯಾಮ್ ಪ್ರಸಾದ್ , ಹಮೀದ್ ನೆಕ್ಕರ, ಶಾಹಿನಾ ಅನ್ವರ್, ಅನ್ನತ್ ಬೀಬಿ, ಶಮೀಮ, ಸುಬೈದಾ ಚೆಡೆಕ್ಕಾಲ್, ವ್ಯಾಪಾರಿ ಪ್ರತಿನಿಧಿ ರವಿನವಶಕ್ತಿ, ಅಶ್ರಫ್ ಪಳ್ಳಿಕಂಡಂ,ಅಖಿಲೇಶ್ ನಗುಮುಗಂ ಚಂದ್ರಹಾಸ ಮಾಸ್ಟರ್, ಬದರುದ್ದೀನ್ ಮಾಸ್ಟರ್, ರಾಜೇಶ್ ಆಳ್ವ, ಚಂದ್ರಶೇಖರ್, ಕುರುಪ್ , ತಾರಾನಾಥ ರೈ, ಕೆ. ಶಾರದ, ಚಂದ್ರನ್ ಪೊಯ್ಯಕಂಡಂ, ಅನ್ವರ್ ಓಸೋನ್, ಎಚ್.ಎಂ.ಸಿ. ಅಧ್ಯಕ್ಷ ಖಲೀಲ್, ಸುಬೈರ್ ಬಾಪ್ಪಾಲಿಪ್ಪೊನಂ, ಪಿ.ಟಿ.ಎ. ಅಧ್ಯಕ್ಷ ಖಾಲಿದ್ ಬಾಪ್ಪಾಲಿಪ್ಪೊನಂ, ಮದರ್ ಪಿ.ಟಿ.ಎ. ಅಧ್ಯಕ್ಷೆ ಜಸೀಲ, ಪಿ.ಟಿ.ಎ. ಉಪಾಧ್ಯಕ್ಷ ಇಬ್ರಾಹಿಂ ಹಾಗೂ ಮಾಜಿ ಪಿ.ಟಿ.ಎ. ಅಧ್ಯಕ್ಷರಾದ ರಾಮ ಮತ್ತು ಮೊಹಮ್ಮದ್ ಕರೋಡಿ ಮೊದಲಾದವರು ಉಪಸ್ಥಿತರಿದ್ದರು.