ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ ಮತ್ತು ಶಿಸ್ತನ್ನು ಬೆಳೆಸುವಲ್ಲಿ ಕ್ರೀಡೆ ಪರಿಣಾಮಕಾರಿ ಮಾಧ್ಯಮವಾಗಿದೆ. ದೈಹಿಕ ಚಟುವಟಿಕೆಗಳ ಜೊತೆಗೆ ಮಾನಸಿಕ ವಿಕಾಸಕ್ಕೂ ಕ್ರೀಡೆ ಸಹಕಾರಿಯಾಗಿದೆ ಎಂದು ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ನಿರೀಕ್ಷಕರಾದ ಆಶಾ ನಾಯಕ್ ಹೇಳಿದರು.
ಶ್ರೀ ವೆಂಕಟರಮಣಸ್ವಾಮಿ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕಿ ಕೆ. ರೇಖಾ ಶೆಣೈ ಮಾತನಾಡಿ, ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿಯೂ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗಾಗಿ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಹರಿಪ್ರಸಾದ್ ಉಪಸ್ಥಿತರಿದ್ದರು. ಬಿ.ಆರ್.ಎಂ.ಪಿ.ಸಿ. ಶಾಲೆಯ ಪ್ರಾಂಶುಪಾಲೆ ಪೂರ್ಣೇಶ್ವರಿ ಭಟ್ ಸ್ವಾಗತಿಸಿದರು. ಎಸ್.ವಿ.ಎಸ್. ಪಿ.ಯು. ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ. ವಂದಿಸಿದರು. ಚೈತ್ರಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಆಶ್ನಿ ಆರ್. ಶೆಟ್ಟಿ ತಂಡದವರು ಪ್ರಾರ್ಥಿಸಿದರು. ಗೌತಮಿ ಕಾರ್ಯಕ್ರಮ ನಿರೂಪಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಶ್, ಪ್ರತೀಕ್ಷಾ ಹಾಗೂ ಸುರೇಖಾ ಕ್ರೀಡಾಕೂಟವನ್ನು ನಡೆಸಿಕೊಟ್ಟರು. ಕ್ರೀಡಾಕೂಟದ ಆರಂಭದಲ್ಲಿ ಸಮೂಹ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

