ತೆಂಕಮಿಜಾರು : ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದ ಬೆಳವಣಿಗೆಗಳಿಂದ ಬೇಸರಗೊಂಡಿರುವ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಜನಾನುರಾಗಿ ನಾಯಕ ವಿದ್ಯಾನಂದ ಶೆಟ್ಟಿ ಅವರಿಗೆ ಬೆನ್ನೆಲುಬಾಗಿ ನಿಂತು ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಬೆಂಬಲ ವ್ಯಕ್ತಪಡಿಸಿದ ಅಭಿಮಾನಿಗಳು, ಹಿತೈಷಿಗಳು ಮತ್ತು ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಅವರ ಅಭಿಮಾನಿಗಳ ಬಳಗದ ವತಿಯಿಂದ ಭಾನುವಾರ ವಿಶೇಷ ಸಭೆಯನ್ನು ಆಯೋಜಿಸಲಾಯಿತು.
ಸಭೆಯಲ್ಲಿ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್‌ಗಳಿಂದ ಆಗಮಿಸಿದ್ದ ವಿದ್ಯಾನಂದ ಶೆಟ್ಟಿ ಅವರ ಅಭಿಮಾನಿಗಳು, ಹಿತೈಷಿಗಳು, ಮಾರ್ಗದರ್ಶಕರು ಹಾಗೂ ಅವರಿಂದ ವಿವಿಧ ರೀತಿಯ ಸೇವೆಗಳನ್ನು ಪಡೆದಿರುವ ಸಾರ್ವಜನಿಕರು ಸೇರಿದಂತೆ ಸುಮಾರು 400ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜವನೆರ್ ಬೆದ್ರ ಸಂಘಟನೆಯ ಸ್ಥಾಪಕ ಅಧ್ಯಕ್ಷ ಅಮರ್ ಕೋಟೆ, ಭಜರಂಗದಳದ ಪ್ರಮುಖ ಅಭಿಲಾಷ್ ಅರ್ಜುನಪುರ , ತೆಂಕಮಿಜಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಮುತ್ತು, ಮಾಜಿ ಸದಸ್ಯ ರಾಮಚಂದ್ರ ಗೌಡ, ಅಶ್ವತ್ಥಪುರ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಗೌಡ, ಸ್ಥಳೀಯ ಹಿರಿಯರಾದ ದೂಜ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾನಂದ ಶೆಟ್ಟಿ ಮಾತನಾಡಿ, ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ತಮಗೆ ಆದ ನಿರಾಸೆ ಹಾಗೂ ಅವಮಾನಕರ ಅನುಭವದ ಕುರಿತು ಸಭಿಕರ ಮುಂದೆ ವಿವರವಾಗಿ ಮನದಾಳದ ಮಾತುಗಳನ್ನು ಹಂಚಿಕೊಂಡರು. ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಎಳೆಎಳೆಯಾಗಿ ವಿವರಿಸಿದ ಅವರು, ತಮ್ಮ ಪರವಾಗಿ ನಿಂತು ನೈತಿಕ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ನಂತರ ಮಾತನಾಡಿದ ಭಜರಂಗದಳದ ಪ್ರಮುಖ ಅಭಿಲಾಷ್ ಅರ್ಜುನಾಪುರ , ವಿದ್ಯಾನಂದ ಶೆಟ್ಟಿ ಅವರ ಸರಳತೆ, ವಿನಯಶೀಲತೆ ಮತ್ತು ಜನಸೇವಾ ಮನೋಭಾವವನ್ನು ಶ್ಲಾಘಿಸಿದರು. “ವಿದ್ಯಾನಂದ ಶೆಟ್ಟಿ ಅವರು ಹುದ್ದೆಗಾಗಿ ದುಡಿಯುವ ವ್ಯಕ್ತಿಯಲ್ಲ. ಜನರ ಸೇವೆಯೇ ಅವರ ಗುರಿ. ಇಂತಹ ವ್ಯಕ್ತಿಗೆ ಆಗಿರುವ ಅನ್ಯಾಯಕ್ಕೆ ಮುಂದಿನ ದಿನಗಳಲ್ಲಿ ನ್ಯಾಯ ದೊರೆಯಲಿ ಎಂದು ಹಾರೈಸುತ್ತೇನೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜವನೆರ್ ಬೆದ್ರ ಸಂಘಟನೆಯ ಸ್ಥಾಪಕ ಅಧ್ಯಕ್ಷ ಅಮರ್ ಕೋಟೆ, “ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸ್ವಯಂಪ್ರೇರಿತರಾಗಿ ಸೇರಿರುವುದೇ ವಿದ್ಯಾನಂದ ಶೆಟ್ಟಿ ಅವರು ಈಗಾಗಲೇ ಜನರ ಮನಸ್ಸುಗಳನ್ನು ಗೆದ್ದಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಧ್ಯಕ್ಷ ಸ್ಥಾನ ಅಥವಾ ಯಾವುದೇ ಹುದ್ದೆ ಶಾಶ್ವತವಲ್ಲ. ಆದರೆ ಜನರ ವಿಶ್ವಾಸ ಗಳಿಸುವುದು ಅತ್ಯಂತ ದೊಡ್ಡ ಸಾಧನೆ. ರಾಜಕೀಯದಲ್ಲಿ ತುಳಿಯುವ ಪ್ರಯತ್ನಗಳು ಹೊಸದಲ್ಲ. ಆದರೆ ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಜನರಿಗಾಗಿ ದುಡಿಯುವ ಒಬ್ಬ ನಿಷ್ಠಾವಂತ ನಾಯಕನಿಗೆ ಮೋಸ ಮಾಡಿರುವುದು ಅತ್ಯಂತ ಖೇದಕರ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಪಕ್ಷದವರಿಗೆ ದುಬಾರಿಯಾಗಲಿದೆ. ಪಕ್ಷದ ವರಿಷ್ಠರ ಇಂತಹ ನಿರ್ಲಕ್ಷ್ಯವೇ ಅವರ ಅವನತಿಗೆ ಕಾರಣವಾಗಬಹುದು” ಎಂದು ಅಭಿಪ್ರಾಯಪಟ್ಟರು.
ತೆಂಕಮಿಜಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮುತ್ತು ಮಾತನಾಡಿ, “ವಿದ್ಯಾನಂದನಿಗೆ ಆಗಿರುವ ಅವಮಾನ ನನ್ನ ಮಗನಿಗೆ ಆದ ಅವಮಾನವೆಂದು ನಾನು ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ನೀನು ಯಾವ ನಿರ್ಧಾರ ಕೈಗೊಂಡರೂ, ಯಾವ ಚುನಾವಣೆಯಲ್ಲಿ ಸ್ಪರ್ಧಿಸಿದರೂ ನಾವು ಎಲ್ಲರೂ ನಿನ್ನ ಬೆಂಬಲಕ್ಕೆ ನಿಲ್ಲುತ್ತೇವೆ. ನಿನ್ನ ಗೆಲುವಿಗಾಗಿ ಶ್ರಮಿಸುತ್ತೇವೆ” ಎಂದು ಭಾವನಾತ್ಮಕವಾಗಿ ಹೇಳಿದರು.
ಸಭೆಯಲ್ಲಿ ಮಾತನಾಡಿದ ವಿದ್ಯಾನಂದ ಶೆಟ್ಟಿ ಅವರ ತಂದೆ ಸದಾಶಿವ ಶೆಟ್ಟಿ, “ನಾನು ಸುಮಾರು ಇಪ್ಪತ್ತು ವರ್ಷಗಳ ಕಾಲ ಪಂಚಾಯತ್ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಘಟನೆ ನಡೆದಿರುವುದನ್ನು ಕಂಡಿಲ್ಲ. ನನ್ನ ಮಗನಿಗೆ ಹಲವು ಬಾರಿ ರಾಜಕೀಯದಿಂದ ದೂರ ಇರಲು ಸಲಹೆ ನೀಡಿದ್ದೆ. ಆದರೆ ಜನರ ಸೇವೆಯ ಉದ್ದೇಶದಿಂದ ಅವನು ಮುಂದುವರಿದ. ಯಾವುದೇ ಹುದ್ದೆಯ ಆಕಾಂಕ್ಷೆ ಅವನಿಗಿರಲಿಲ್ಲ. ಅವರೇ ಕರೆದು ಅಧ್ಯಕ್ಷನಾಗಬೇಕು ಎಂದು ಹೇಳಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಮೊದಲಿಗೆ ಅವನ ಪರವಾಗಿದ್ದ ವ್ಯಕ್ತಿಯನ್ನೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪ್ರೇರೇಪಿಸಲಾಯಿತು. ಇದರ ಹಿಂದಿರುವ ಕುತಂತ್ರಿಗಳಿಗೆ, ಶಕುನಿಯ ಅಕ್ರಮ ಪಿಂಡಗಳಿಗೆ ಅವರು ಸೃಷ್ಟಿಸಿರುವ *ವ್ಯಕ್ತಿಗಳಿಗೆ * ಜನರೇ ಮುಂದಿನ ದಿನಗಳಲ್ಲಿ ಸರಿಯಾದ ಉತ್ತರ ನೀಡುವ ಮೂಲಕ ಬುದ್ಧಿ ಕಲಿಸಬೇಕು” ಎಂದು ಹೇಳಿದರು.
ಅಶ್ವತ್ಥಪುರ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ, ವಿದ್ಯಾನಂದ ಶೆಟ್ಟಿ ಅವರ ಮುಂದಿನ ರಾಜಕೀಯ ಹಾಗೂ ಸಾಮಾಜಿಕ ಜೀವನದ ನಿರ್ಧಾರಗಳಿಗೆ ಶುಭ ಹಾರೈಸಿದರು. ಜನಸೇವೆಯ ಹಾದಿಯಲ್ಲಿ ಅವರು ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಆಶಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಅನೇಕರು ವಿದ್ಯಾನಂದ ಶೆಟ್ಟಿ ಅವರ ಜನಸೇವಾ ಕಾರ್ಯಗಳನ್ನು ಸ್ಮರಿಸಿದರು. ಕುಡಿಯುವ ನೀರಿನ ಸಮಸ್ಯೆ ಪರಿಹಾರ, ಅತಿವೃಷ್ಟಿಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ದೊರಕಿಸಲು ಮಾಡಿದ ಪ್ರಯತ್ನಗಳು, ಗ್ರಾಮೀಣ ರಸ್ತೆ ಅಭಿವೃದ್ಧಿ, ಬೀದಿದೀಪಗಳ ಅಳವಡಿಕೆ, ಶಾಲೆ ಹಾಗೂ ಅಂಗನವಾಡಿ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಪ್ರಸ್ತಾವನೆ, ಸ್ವಾಗತ, ಧನ್ಯವಾದ ಹಾಗೂ ಸಂಪೂರ್ಣ ಕಾರ್ಯಕ್ರಮ ನಿರ್ವಹಣೆಯನ್ನು ಪ್ರಶಾಂತ್ ಜೆ. ವಹಿಸಿದ್ದರು.
ಕೊನೆಯಲ್ಲಿ ವಿದ್ಯಾನಂದ ಶೆಟ್ಟಿ ಪರ ಜಯಘೋಷಗಳು, ಘೋಷಣೆಗಳು ಹಾಗೂ ಏಕತೆಯ ಸಂದೇಶಗಳೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

