ಪೂಜೆಗಾಗಿ ಹೂವುಗಳನ್ನು ಕೀಳಲು ಬಾಲ್ಕನಿಗೆ ತೆರಳಿದ್ದ ತಂದೆ ಮತ್ತು ಮಗ 23ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾದಲ್ಲಿ ಶುಕ್ರವಾರ (ಅ.30) ನಡೆದಿದೆ.
ಮೃತರನ್ನು 40 ವರ್ಷದ ರಂದೀಪ್ ಪಾತ್ರಾ ಮತ್ತು ಅವರ 11 ವರ್ಷದ ಪುತ್ರ ಆರವ್ ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಪೂಜೆಗಾಗಿ ಹೂವುಗಳನ್ನು ಕೀಳಲು ತಂದೆ ಮತ್ತು ಮಗ ಮನೆಯ ಬಾಲ್ಕನಿಗೆ ತೆರಳಿದ್ದರು. ಈ ವೇಳೆ ಬಾಲಕ ಆರವ್ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬೀಳುತ್ತಿದ್ದಾಗ ಆತನನ್ನು ರಕ್ಷಿಸಲು ತಂದೆ ರಂದೀಪ್ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅವರೂ ನಿಯಂತ್ರಣ ಕಳೆದುಕೊಂಡು 23ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬಿಸ್ರಖ್ ಠಾಣೆಯ ಪೊಲೀಸರು ಇಬ್ಬರ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

