
ವಿವೇಕಾನಂದ ಪಿಯು ಕಾಲೇಜಿನಲ್ಲಿ ರಾಜ್ಯಮಟ್ಟದ ‘ಕನಸುಗಳು–2026’ ಉದ್ಘಾಟನೆ | ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 14 ವಿವಿಧ ಸ್ಪರ್ಧೆಗಳು
ಪುತ್ತೂರು: ಕಂಡ ಕನಸುಗಳನ್ನು ನನಸಾಗಿಸುವ ಪ್ರಯತ್ನಗಳು ಜೊತೆಗೂಡಿದಾಗ ಮಾತ್ರ ಭವಿಷ್ಯ ಸುಂದರವಾಗಬಲ್ಲದು. ಕನಸುಗಳನ್ನು ನನಸಾಗಿಸಲು ನಿರಂತರ ಪರಿಶ್ರಮ, ಆತ್ಮವಿಶ್ವಾಸ, ಶಿಸ್ತು ಹಾಗೂ ದೃಢಸಂಕಲ್ಪ ಅತ್ಯಗತ್ಯ. ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಎದೆಗುಂದದೆ, ಸೋಲನ್ನೇ ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಂಡು ಮುನ್ನಡೆಯಬೇಕು. ಗುರಿಯ ಬಗ್ಗೆ ಸ್ಪಷ್ಟತೆ ಮತ್ತು ಸಾಧಿಸುವ ಛಲ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರಬೇಕು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಗೋವಾದ ವೇದಾಂತ ಐರನ್ ಅಂಡ್ ಸ್ಟೀಲ್ ಲಿಮಿಟೆಡ್ನ ಅಸೋಸಿಯೇಟ್ ಮ್ಯಾನೇಜರ್ ಸಿಎ ಶ್ರದ್ಧಾ ವಿ. ಶೆಟ್ಟಿ ಹೇಳಿದರು.
ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಏಕತಾ ವೇದಿಕೆಯಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮ ‘ಕನಸುಗಳು–2026’ ಅನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಸಣ್ಣ ಪ್ರಯತ್ನಗಳೇ ನಾಳಿನ ದೊಡ್ಡ ಸಾಧನೆಗಳಿಗೆ ಭದ್ರ ಬುನಾದಿಯಾಗುತ್ತವೆ. ಯುವಜನತೆ ತಮ್ಮಲ್ಲಿರುವ ಪ್ರತಿಭೆ, ಶಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ರಮೇಶ್ಚಂದ್ರ ಎಂ. ಮಾತನಾಡಿ, ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಜ್ಞಾನಾರ್ಜನೆ, ಕೌಶಲಾಭಿವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಬೇಕು. ‘ಕನಸುಗಳು’ ಕಾರ್ಯಕ್ರಮ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಉತ್ತಮ ವೇದಿಕೆಯಾಗಲಿ ಎಂದು ಆಶಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 14 ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಾಮಾನ್ಯ ರಸಪ್ರಶ್ನೆ, ವಿಜ್ಞಾನ ಮಾದರಿ, ಜಾಹೀರಾತು, ಚಿತ್ರಕಲೆ, ಕನ್ನಡ ಕವನ ರಚನೆ ಮತ್ತು ವಾಚನ, ಪ್ರಾಕೃತಿಕ ರಂಗೋಲಿ, ಯುವ ಪತ್ರಕರ್ತ, ಯುವ ವಾಣಿಜ್ಯೋದ್ಯಮಿ, ಮುಖವರ್ಣಿಕೆ, ವೀಡಿಯೋ ಸಂಕಲನ, ಚರ್ಚಾ ಸ್ಪರ್ಧೆ, ತಾಳವಾದ್ಯ, ಕಲರವ–ಸಾಂಸ್ಕೃತಿಕ ವೈವಿಧ್ಯ, ನಿಧಿಶೋಧ ಹಾಗೂ ಭಗವದ್ಗೀತಾ ಕಂಠಪಾಠ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿನಿ ಸಿಎ ಶ್ರದ್ಧಾ ವಿ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಂಯೋಜಕಿ ದೀಕ್ಷಿತಾ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಂಶುಪಾಲ ದೇವಿಚರಣ್ ರೈ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಮೊನೀಷಾ ವಂದಿಸಿದರು. ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
