ಅಕಾಡೆಮಿಯ ಚಾವಡಿ ತಮ್ಮನ ಸಮರ್ಪಣೆ
ಮಂಗಳೂರು : ತುಳು ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ, ನನ್ನ ಈ ಇಳೀ ವಯಸ್ಸಿನಲ್ಲೂ ನಾನು ತುಳು ಭಾಷೆಯ ಸಲುವಾಗಿ ಯಾವುದೇ ಹೋರಾಟ, ತ್ಯಾಗಕ್ಕೂ ಸಿದ್ಧ ಎಂದು ಹಿರಿಯ ಗಾಂಧಿವಾದಿ, ನಿವೃತ್ತ ಉಪನ್ಯಾಸಕ, ತುಳು ಬರಹಗಾರ ಕೆ.ಟಿ. ಆಳ್ವ ಅವರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ನೀಡಲಾದ ಚಾವಡಿ ತಮ್ಮನ ಗೌರವನ್ನು ಸ್ವೀಕರಿಸಿ ತಿಮ್ಮಣ್ಣ ಆಳ್ವರು ಮಾತನಾಡಿದರು. ತೊಂಬತ್ತೆರಡರ ವಯಸ್ಸಿನ ಕೆ.ಟಿ. ಆಳ್ವರಿಗೆ ಅಕಾಡೆಮಿಯ ಚಾವಡಿ ತಮ್ಮನ ಗೌರವವನ್ನು ಮುಡಿಪು ಪಜೀರ್‌ನ ತಿಮ್ಮಣ್ಣ ಆಳ್ವರ ನಿವಾಸದಲ್ಲಿ ಪ್ರಧಾನ ಮಾಡಲಾಯಿತು. ಮುಡಿಪು ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಬಳಗದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.
ತುಳು ಭಾಷೆಯ ಬಗ್ಗೆ ಜನ ಸಾಮಾನ್ಯರ ಕೈಗೆಟಕುವಂತಹ ಶಬ್ದಕೋಶವೊಂದನ್ನು ಹೊರ ತರಲು ಅಕಾಡೆಮಿ ಮುಂದಾಗಬೇಕೆಂದು ತಿಮ್ಮಣ್ಣ ಆಳ್ವರು ಅಭಿಪ್ರಾಯಪಟ್ಟರು.
ಯಾವುದೇ ಸನ್ಮಾನ, ಪುರಸ್ಕಾರವನ್ನು ಜೀವನದಲ್ಲಿ ಎಂದೂ ಬಯಸದ ನನ್ನನ್ನು ತುಳು ಅಕಾಡೆಮಿ ಚಾವಡಿ ತಮ್ಮನದ ಮೂಲಕ ಗೌರವಿಸಿರುವುದು ನನ್ನ ಯೋಗ ಭಾಗ್ಯವೆಂಬ ಕೃತಜ್ಞತೆಯ ಭಾವವನ್ನು
ಮೂಡಿಸಿದೆ ಎಂದು ಕೆ.ಟಿ. ಆಳ್ವರು ಅನಿಸಿಕೆ ಹಂಚಿಕೊಂಡರು.
ಪಜೀರ್ ಗ್ರಾಮ ಪಂಚಾಯತ್ ಅಧ್ಯಕ್ಷ ರಫೀಕ್ ಪಜೀರ್ ಅವರು ಮಾತನಾಡಿ, ಪಜೀರ್ ಪಂಚಾಯತಿನ ಗ್ರಂಥಾಲಯದಲ್ಲಿ ತುಳು ಭಾಷೆಯ ಪುಸ್ತಕ ವಿಭಾಗವನ್ನು ಆಂಭಿಸುವುದಾಗಿ ತಿಳಿಸಿದರು. ಪಂಚಾಯತ್ ವತಿಯಿಂದ ತುಳು ಕಾರ್ಯಕ್ರಮವನ್ನು ಆಯೋಜಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ತುಳುವಿಗಾಗಿ ಸೇವೆ ಸಲ್ಲಿಸಿದ ಹಿರಿಯ ಸಾಧಕರ ಮನೆಗೆ ತೆರಳಿ, ಊರವರ ಸಮ್ಮುಖದಲ್ಲಿ ಅಕಾಡೆಮಿಯ ಚಾವಡಿ ತಮ್ಮನದ ಗೌರವವನ್ನು ಅರ್ಪಿಸುವ ಕಾರ್ಯಕ್ರಮವನ್ನು ಅಕಾಡೆಮಿ ಆಯೋಜಿಸುತ್ತಿದೆ, ಆ ಮೂಲಕ ಅಕಾಡೆಮಿಯು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿಲು ಮುಂದಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಡಾ. ಎನ್. ಇಸ್ಮಾಯಿಲ್, ಹಿರಿಯ ಲೆಕ್ಕ ಪರಿಶೋಧಕ ಪುಂಡರಿಕಾಕ್ಷ , ಪಜೀರ್ ಪಂಚಾಯತ್ ಸದಸ್ಯರಾದ ಇಮ್ತಿಯಾಜ್ , ಸೀತಾರಾಮ ಶೆಟ್ಟಿ ಮುಗುಳಿ, ಭರತ್ ರಾಜ್ ಶೆಟ್ಟಿ , ಮಾಜಿ ತಾಲೂಕು ಪಂಚಾಯತ್ ಸದಸ್ಯ ಉಮೇಶ್ ಮೊದಲಾದವರು ಮಾತನಾಡಿದರು. ಪತ್ರಕರ್ತ ಶಶಿಧರ ಪೊಯ್ಯತ್ತಬೈಲ್ ಅಭಿನಂದನಾ ಭಾಷಣ ಮಾಡಿದರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಲೇಖಕರಾದ ಚಂದ್ರಹಾಸ ಕಣಂತೂರು, ಶಶಿಧರ್ ಮಂಟಮೆ, ಬಾಬು ಪಿಲಾರ್ , ಎಡ್ವರ್ಡ್ ತೊಕ್ಕೊಟ್ಟು , ಅಮಿತಾ ಮೊದಲಾದವರು ಪಾಲ್ಗೊಂಡರು. ಡಾ. ರಾಜರಾಮ್ ಆಳ್ವ ಉಪಸ್ಥಿತರಿದ್ದರು.
ಕೆ.ಟಿ. ಆಳ್ವರು ಶಿಕ್ಷಣಕ್ಕಾಗಿ ನೀಡುತ್ತಿದ್ದ ಆದ್ಯತೆ ಹಾಗೂ ಪ್ರೋತ್ಸಾವನ್ನು ಎಲ್ಲರೂ ತಮ್ಮ ಮಾತಿನಲ್ಲಿ ಉಲ್ಲೇಖಿಸಿದರು.
ಮುಡಿಪು ಸರಕಾರಿ ಪ.ಪೂ ಕಾಲೇಜಿನ ಹಳೆ ವಿದ್ಯಾರ್ಥಿ ಬಳಗದ ಪ್ರವೀಣ್ ಅಮ್ಮೆಂಬಳ ಕಾರ್ಯಕ್ರಮ ನಿರ್ವಹಿಸಿದರು, ಇಸ್ಮತ್ ಪಜೀರ್ ಸ್ವಾಗತಿಸಿದರು. ಅನ್ನಪೂರ್ಣೇಶ್ವರಿ ವಂದಿಸಿದರು.