ಹಿಂದಿನ ಸಾಧಕರಿಗೆ ಮಾತೃಭಾಷೆಯೇ ಶಿಕ್ಷಣದ ಬಲವಾಗಿತ್ತು: ಇಂದಿರಾ ಹಾಲಂಬಿ

0
6

ಉಡುಪಿ : ದೇಶವು ಶೈಕ್ಷಣಿಕ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಜನರು ನಿಜವಾಗಿಯೂ ಸುಖವಾಗಿದ್ದಾರೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಹಿಂದಿನ ಕಾಲದ ಬಹುತೇಕ ಸಾಧಕರು ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆದವರು. ಆದರೆ ಇಂದು ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಸರ್ವಾಂಗೀಣ ವಿಕಾಸದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮಕ್ಕಳ ಸಾಹಿತಿ ಇಂದಿರಾ ಹಾಲಂಬಿ ಅಭಿಪ್ರಾಯಪಟ್ಟರು.

ಬುದ್ಧಿವಂತ ಮಕ್ಕಳು ಇಂಗ್ಲಿಷ್ ಮಾಧ್ಯಮದ ಶಿಕ್ಷಣದಲ್ಲಿ ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸಬಹುದು. ಆದರೆ ಸಾಧಾರಣ ಕಲಿಕಾ ಸಾಮರ್ಥ್ಯ ಹೊಂದಿರುವ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಕಬ್ಬಿಣದ ಕಡಲೆಯಂತಾಗಿ ಗೊಂದಲಕ್ಕೆ ಕಾರಣವಾಗುತ್ತಿದೆ. ಮಕ್ಕಳಿಗೆ ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ದೊರೆತಾಗ ಕಲಿಕೆ ಸುಲಭವಾಗುವುದರ ಜೊತೆಗೆ ಅವರ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಸಂಸತಿ ವಿಶ್ವ ಪ್ರತಿಷ್ಠಾನ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಆಶ್ರಯದಲ್ಲಿ ಪ್ರದಾನ ಮಾಡಲಾದ ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಶ್ವಸಾಹಿತ್ಯ ಪುರಸ್ಕಾರ ಪುರಸ್ಕೃತ ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಹಾಗೂ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಶಿಷ್ಟಾಚಾರ ಅಧಿಕಾರಿಯಾಗಿದ್ದ ಲೇಖಕ ಜಯಪ್ರಕಾಶ್ ಪುತ್ತೂರು ಮಾತನಾಡಿದರು. ನಾಡೋಜ ಪ್ರೊ. ಕೆ.ಪಿ. ರಾವ್ ಸಭಾಧ್ಯಕ್ಷತೆ ವಹಿಸಿದ್ದರು.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ನಿರಂಜನ ಚೋಳಯ್ಯ, ಉದ್ಯಮಿ ವಿಶ್ವನಾಥ ಶೆಣೈ, ವಿಶ್ವಸಂಸತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಂಕರ್, ಮಲಬಾರ್ ಗೋಲ್ಡ್ ಶಾಖಾ ಮುಖ್ಯಸ್ಥ ವಿಜಯಕುಮಾರ್, ಸಂಧ್ಯಾ ಶೆಣೈ, ವಸಂತ್ ಆರ್., ರಾಘವೇಂದ್ರ ಪ್ರಭು ಕರ್ವಾಲ್, ರಂಜನಿ ವಸಂತ್ ಹಾಗೂ ದೀಪ ಚಂದ್ರಕಾಂತ್ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಸ್ವಾಗತಿಸಿದರು. ಕೋಶಾಧಿಕಾರಿ ರಾಜೇಶ್ ಪಣಿಯಾಡಿ ಕಾರ್ಯಕ್ರಮ ನಿರೂಪಿಸಿದರು.