ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಕಾರಣಕ್ಕೆ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಗೌಡ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ಮಾಡಿದ್ದರು. ಕೆಲ ದಿನಗಳ ಬಳಿಕ ಅವರಿಗೆ ಜಾಮೀನು ಕೂಡ ಸಿಕ್ಕಿತ್ತು. ಈಗ ರಜಯ್ ಅವರನ್ನು ಬೆಂಗಳೂರಿನ ಬಸವೇಶ್ವರನಗರ ಪೊಲೀಸರು ಮತ್ತೆ ಬಂಧಿಸಿದ್ದಾರೆ. ವಿನಯ್ಗಾಗಿ ಹುಡುಕಾಟ ನಡೆದಿದೆ. ರಜತ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕೋರ್ಟ್ ಎದುರು ಹಾಜರು ಪಡಿಸಲು ಸಿದ್ಧತೆ ನಡೆದಿದೆ.
ರಜತ್ ಹಾಗೂ ವಿನಯ್ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ರಜತ್ ಹಾಗೂ ವಿನಯ್ ಬಂಧನ ಆಯಿತು. ರೀಲ್ಸ್ಗೆ ಬಳಕೆ ಮಾಡಿದ್ದ ಶಸ್ತ್ರಾಸ್ತ್ರವನ್ನು ಒಪ್ಪಿಸುವಂತೆ ಪೊಲೀಸರು ಸೂಚಿಸಿದ್ದರು. ಆದರೆ, ಈ ವೇಳೆ ರಬ್ಬರ್ ಮಚ್ಚು ನೀಡಲಾಯಿತು. ಇದು ಕಣ್ತಪ್ಪಿನಿಂದ ಆಗಿದ್ದು, ನಿಜವಾದ ಮಚ್ಚನ್ನು ನೀಡುತ್ತೇವೆ ಎಂದಿದ್ದರು. ಆ ಬಳಿಕ ರೀಲ್ಸ್ಗೆ ಬಳಕೆ ಆದ ಮಚ್ಚನ್ನು ಎಸೆದಿದ್ದಾಗಿ ರಜತ್ ಒಪ್ಪಿಕೊಂಡಿದ್ದಾರೆ.
ಕೇಸ್ನಲ್ಲಿ ಇದುವರೆಗೆ ಬಳಕೆ ಮಾಡಿದ್ದ ಮಾರಕಾಸ್ತ್ರವನ್ನು ಪೊಲೀಸರ ಎದುರು ಹಾಜರು ಪಡಿಸಿಲ್ಲ. ಹೀಗಾಗಿ ಸಾಕ್ಷಿನಾಶ ಎಂದು ಸಹ ಪೋಲಿಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಅತ್ತ ಕೋರ್ಟ್ನಲ್ಲಿ ರಜತ್ಗೆ ಜಾಮೀನು ನೀಡಲಾಗಿದೆ. ಈ ವೇಳೆ ಕೋರ್ಟ್ ಕೆಲ ಷರತ್ತುಗಳನ್ನು ವಿಧಿಸಿತ್ತು. ಇದರಲ್ಲಿ ಅವರು ವಿಚಾರಣೆಗೆ ಹಾಜರಿ ಹಾಕಲೇಬೇಕು ಎಂಬುದು ಕೂಡ ಆಗಿತ್ತು.
ಆದರೆ, ರಜತ್ ಅವರು ಕೋರ್ಟ್ ವಿಚಾರಣೆಗೆ ಹಾಜರಿ ಹಾಕಿಲ್ಲ. ಹೀಗಾಗಿ, ರಜತ್ ವಿರುದ್ಧ ನಾನ್ ಬೇಲೆಬೆಲ್ ವಾರಂಟ್ ಹೊರಡಿಸಿತ್ತು. ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರು ಪಡಿಸುವಂತೆ ಸೂಚಿಸಿತ್ತು. ಕೋರ್ಟ್ ಆದೇಶದಮೇರೆಗೆ ಪೊಲೀಸರು ಮತ್ತೊಮ್ಮೆ ರಜತ್ನ ಬಂಧಿಸಿದ್ದಾರೆ. ಅವರನ್ನು 24ನೇ ಎಸಿಜೆಎಂ ಕೋರ್ಟ್ಗೆ ಪೊಲೀಸರು ಹಾಜರುಪಡಿಸಲಿದ್ದಾರೆ.