
ಕಾರ್ಕಳ : ಮಲೇಷಿಯಾದ ರೆಸ್ಟೋರೆಂಟ್ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು, ನಕಲಿ ದಾಖಲೆಗಳನ್ನು ನೀಡಿ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಘಟನೆ ವರದಿಯಾಗಿದೆ.
ಮಿಯ್ಯಾರು ಗ್ರಾಮದ ಪ್ರಕಾಶ್ ಆಚಾರ್ಯ (34) ವಂಚನೆಗೊಳಗಾದವರು. ಛಾಯಾಗ್ರಹಣ ವೃತ್ತಿ ಮಾಡಿಕೊಂಡಿರುವ ಅವರಿಗೆ ಬಜಗೋಳಿಯ ಕೃಷ್ಣ ಕುಲಾಲ್ ಹಾಗೂ ಬೆಂಗಳೂರಿನ ಮೋಹಿತ್ ಎಂಬವರು ಮಲೇಷಿಯಾದ ರೆಸ್ಟೋರೆಂಟ್ನಲ್ಲಿ ಉದ್ಯೋಗ ಕೊಡಿಸುವುದಾಗಿ ತಿಳಿಸಿ, ಉದ್ಯೋಗಕ್ಕೆ ಸಂಬಂಧಿಸಿದ ಜಾಹೀರಾತಿನ ಚಿತ್ರವನ್ನು ಮೊಬೈಲ್ಗೆ ಕಳುಹಿಸಿದ್ದರು ಎನ್ನಲಾಗಿದೆ.
ನಂತರ ಉದ್ಯೋಗಕ್ಕೆ ಅಗತ್ಯವಿರುವ ದಾಖಲೆಗಳ ಸಿದ್ಧತೆ, ಮಲೇಷಿಯಾಗೆ ತೆರಳುವ ಪ್ರಯಾಣ ವೆಚ್ಚ ಹಾಗೂ ವೀಸಾ ಶುಲ್ಕ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಹಣ ಪಾವತಿಸುವಂತೆ ತಿಳಿಸಿದ್ದರು. ಇದನ್ನು ನಂಬಿದ ಪ್ರಕಾಶ್ ಆಚಾರ್ಯ ಅವರು ಗೂಗಲ್ ಪೇ ಮೂಲಕ ಹಂತ ಹಂತವಾಗಿ ₹1.40 ಲಕ್ಷವನ್ನು ಕೃಷ್ಣ ಕುಲಾಲ್ ಅವರ ಖಾತೆಗೆ ಹಾಗೂ ₹85 ಸಾವಿರವನ್ನು ಮೋಹಿತ್ ಅವರ ಖಾತೆಗೆ, ಒಟ್ಟು ₹2.25 ಲಕ್ಷ ವರ್ಗಾಯಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಣ ಪಡೆದ ಬಳಿಕ ಆರೋಪಿಗಳು ಪ್ರಕಾಶ್ ಆಚಾರ್ಯರಿಗೆ ಮಲೇಷಿಯಾಗೆ ತೆರಳಲು ವಿಮಾನ ಟಿಕೆಟ್, ಇಮಿಗ್ರೇಷನ್ ಪಾಸ್ ಹಾಗೂ ಉದ್ಯೋಗ ಪಾಸ್ಗಳನ್ನು ಕಳುಹಿಸಿಕೊಟ್ಟಿದ್ದರು ಎನ್ನಲಾಗಿದೆ. ದಾಖಲೆಗಳನ್ನು ನಂಬಿ ಅವರು ಮಲೇಷಿಯಾಗೆ ತೆರಳಿದಾಗ, ಅಲ್ಲಿನ ವಿಮಾನ ನಿಲ್ದಾಣದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದು, ಇಮಿಗ್ರೇಷನ್ ಪಾಸ್ ಹಾಗೂ ಉದ್ಯೋಗ ಪಾಸ್ ನಕಲಿ ಎಂಬುದು ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಲೇಷಿಯಾದಲ್ಲಿದ್ದ ಸಂದರ್ಭದಲ್ಲಿ ಮನ್ವಿರ್ ಸಿಂಗ್ ಎಂಬ ಏಜೆಂಟ್ ₹35 ಸಾವಿರ ಪಡೆದುಕೊಂಡಿದ್ದಾನೆ ಎಂದು ಪ್ರಕಾಶ್ ಆಚಾರ್ಯ ಅವರು ತಿಳಿಸಿದ್ದಾರೆ.
ಕೃಷ್ಣ ಕುಲಾಲ್ ಹಾಗೂ ಮೋಹಿತ್ ಅವರು ಸುಳ್ಳು ದಾಖಲೆಗಳನ್ನು ನೀಡಿ ಹಣ ಪಡೆದು ವಂಚಿಸಿರುವುದಾಗಿ ಆರೋಪಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
