ಉಡುಪಿ : ವಿಶ್ವ ಹೃದಯ ದಿನದ ಅಂಗವಾಗಿ ಆದರ್ಶ ಆಸ್ಪತ್ರೆಯಲ್ಲಿ ಉಚಿತ ಬೃಹತ್ ಹೃದಯ ತಪಾಸಣಾ ಶಿಬಿರ ರವಿವಾರ ಜರುಗಿತು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಶಿಬಿರ ಉದ್ಘಾಟಿಸಿ, ಯಾವುದೇ ರೋಗಗಳ ತಡೆಗೆ ಜಾಗೃತಿ ಅತ್ಯಂತ ಅಗತ್ಯ. ಆದರ್ಶ ಆಸ್ಪತ್ರೆಯು ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.
ಆದರ್ಶ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಜಿ.ಎಸ್. ಚಂದ್ರಶೇಖರ್ ಪ್ರಸ್ತಾವಿಕವಾಗಿ ಮಾತನಾಡಿ, ಸೂಕ್ತ ದೇಹತೂಕ ನಿರ್ವಹಣೆ, ಮಧುಮೇಹ ನಿಯಂತ್ರಣ, ದಿನನಿತ್ಯದ ವ್ಯಾಯಾಮ, ಒತ್ತಡ ರಹಿತ ಜೀವನ ಹಾಗೂ ಸರಿಯಾದ ನಿದ್ರೆ ಹೃದಯದ ಆರೋಗ್ಯಕ್ಕೆ ಅತ್ಯಗತ್ಯ ಎಂದು ತಿಳಿಸಿದರು.
ಹೃದಯ ರೋಗ ತಜ್ಞ ಡಾ. ಸುಹಾಸ್ ಜಿ.ಸಿ. ಮಾತನಾಡಿ, ಸಮತೋಲಿತ ಆಹಾರ, ನಿರಂತರ ವ್ಯಾಯಾಮ, ಅಗತ್ಯ ನಿದ್ರೆ ಮತ್ತು ವಿಶ್ರಾಂತಿ ಹೃದಯದ ಆರೋಗ್ಯ ಕಾಪಾಡಲು ನೆರವಾಗುತ್ತವೆ. ಸಾರ್ವಜನಿಕರು ನಿಯಮಿತವಾಗಿ ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು ಎಂದರು.
ಹೃದಯ ರೋಗ ತಜ್ಞರಾದ ಡಾ. ಶ್ರೀಕಾಂತ್ಕೃಷ್ಣ, ಡಾ. ವಿಶು ಕುಮಾರ್ ಬಿ. ಹಾಗೂ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕುಲರ್ ಸರ್ಜನ್ ಡಾ. ಗುರುಪ್ರಸಾದ್ ಡಿ. ರೈ ಹೃದಯ ಆರೋಗ್ಯ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು. ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಆರ್ಬಿಸಿ, ಇಸಿಜಿ, ಇಕೋ, ಟಿಎಂಟಿ ಹಾಗೂ ಲಿಪಿಡ್ ಪ್ರೊಫೈಲ್ ಪರೀಕ್ಷೆಗಳನ್ನು ನಡೆಸಲಾಯಿತು.

