ಸ್ವಚ್ಛತಾ ಹಿ ಸೇವಾ ಬೀದಿ ನಾಟಕ ಪ್ರದರ್ಶನ

0
45

ಉಡುಪಿ : ಸ್ವಚ್ಛತಾ ಹಿ ಸೇವಾ ಅಭಿಯಾನ ಹಾಗೂ ವಿಶ್ವ ಪ್ರವಾಸೋದ್ಯಮ ದಿನದ ಸಪ್ತಾಹದ ಅಂಗವಾಗಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ವಿದ್ಯಾರ್ಥಿಗಳಿಂದ ಉಡುಪಿ, ಬೈಂದೂರು ಮೂಕಾಂಬಿಕಾ ರೋಡ್ ಹಾಗೂ ಮುರ್ಡೇಶ್ವರ ರೈಲು ನಿಲ್ದಾಣಗಳಲ್ಲಿ ಜಾಗೃತಿ ಮೂಡಿಸುವ ಬೀದಿ ನಾಟಕ (ನುಕ್ಕಡ್ ನಾಟಕ) ಪ್ರದರ್ಶನ ಯಶಸ್ವಿಯಾಗಿ ನೆರವೇರಿತು.

ಸ್ವಚ್ಛ ಪ್ರವಾಸಿ ತಾಣಗಳು ಮತ್ತು ಪಾರಂಪರಿಕ ರೈಲ್ವೆ ತಾಣಗಳು ಎಂಬ ಮುಖ್ಯ ಆಶಯದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಕಾರವಾರ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಡಾ. ಸುಬ್ರಮಣ್ಯ ಭಟ್ ಅವರು ಉಡುಪಿ ಜಿಲ್ಲೆಯ ಸಂಕ್ಷಿಪ್ತ ಇತಿಹಾಸ ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಕುರಿತು ಉಪಯುಕ್ತ ಮಾಹಿತಿ ನೀಡಿದರು. ತದನಂತರ ಎಂಐಸಿ ವಿದ್ಯಾರ್ಥಿಗಳು ಜಾನಪದ ಕಲೆಯಾದ ಹುಲಿವೇಷ ನೃತ್ಯ ಪ್ರದರ್ಶಿಸಿ ಪ್ರಾಣಿ-ಪರಿಸರ ಸಂರಕ್ಷಣೆ ಮತ್ತು ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ಮೆರೆದರು.

ಯುವ ಕಲಾತಂಡದ ವಿದ್ಯಾರ್ಥಿಗಳು ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಸ್ವಚ್ಛತೆ, ತ್ಯಾಜ್ಯ ಮುಕ್ತ ಪ್ರವಾಸೋದ್ಯಮ ಹಾಗೂ ಸಾರ್ವಜನಿಕ ಸ್ವಚ್ಛತೆಯ ಕುರಿತು ಬೀದಿ ನಾಟಕದ ಮೂಲಕ ಪರಿಣಾಮಕಾರಿ ಜಾಗೃತಿ ಸಂದೇಶ ರವಾನಿಸಿದರು. ಕಾರ್ಯಕ್ರಮದಲ್ಲಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ನಿರ್ದೇಶಕರಾದ ಡಾ. ಶುಭಾ, ಡಾ. ಕಾರ್ತಿಕೇಯ ಗೋಸ್ವಾಮಿ, ಸಹಾಯಕ ಪ್ರಾಧ್ಯಾಪಕರಾದ ಚಂದಕುಮಾರ್ ಉಪಸ್ಥಿತರಿದ್ದರು.