ಉಡುಪಿ : ಜಿ ಎಸ್ ಬಿ ಸಮಾಜ ಹಿತ ರಕ್ಷಣಾ ವೇದಿಕೆ (ರಿ .)ಉಡುಪಿ ಜಿಲ್ಲೆ ನೇತೃತ್ವದಲ್ಲಿ ಬ್ರಹ್ಮಾವರ ತಾಲೂಕು ಉಪ್ಪೂರಿನಲ್ಲಿ 1.11 ಎಕ್ರೆ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ” ವಯೋವಂದನ ಆತಿಥ್ಯ ಗೃಹ” ಯೋಜನೆ ಹಿರಿಯರ ಬದುಕಿನ ಸಂಧ್ಯಾಕಾಲದ ಆಸರೆ ಆಗಲಿದ್ದು, ಈ ಯೋಜನೆಯ ನಿರ್ಮಾಣ ಕಾರ್ಯ ಮತ್ತು ಆ ಬಳಿಕದ ನಿರ್ವಹಣೆಗೆ ಸಮಾಜದ ಸಹಭಾಗಿತ್ವ ಅತಿ ಅಗತ್ಯ.
ಜಿ ಎಸ್ ಬಿ ಸಮಾಜ ಹಿತ ರಕ್ಷಣಾ ವೇದಿಕೆ ಕಳೆದ 14 ವರ್ಷಗಳಿಂದ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜದ ಎಲ್ಲಾ ವರ್ಗದವರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದು, ಎಲ್ಲಾ ಅಡೆತಡೆ ಸವಾಲುಗಳನ್ನು ಎದುರಿಸಿ ಸಮಾಜದ ಅವಶ್ಯಕತೆ ಇರುವ ಹಿರಿಯ ನಾಗರಿಕರಿಗೆ ನೆಮ್ಮದಿಯ ತಾಣದ ನಿರ್ಮಾಣ ಮತ್ತು ಯಶಸ್ವಿ ಕಾರ್ಯನಿರ್ವಹಣೆ ಸಾಧ್ಯವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಯೋಜನೆಗೆ ವೈಯುಕ್ತಿಕವಾಗಿ ಮತ್ತು ಉಡುಪಿ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ವತಿಯಿಂದ ಸಂಪೂರ್ಣ ಸಹಕಾರ ಮತ್ತು ಸಹಭಾಗಿತ್ವ ನೀಡುವುದಾಗಿ ಉಡುಪಿ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ನೂತನ ವಿಶ್ವಸ್ಥರಾದ ಗುಜ್ಜಾಡಿ ಪ್ರಭಾಕರ್ ನಾಯಕ್ ತಿಳಿಸಿದರು.
ಅವರು ಜೂನ್ 28 ಆದಿತ್ಯವಾರದಂದು ಸಂಜೆ ಉಡುಪಿಯ ಪದ್ಮಾವತಿ ಸಭಾಭವನದಲ್ಲಿ ನಿರ್ಮಾಣ ಯೋಜನೆಯ ವಿವಿಧ ಸಮಿತಿಗಳ ರಚನೆ ಮತ್ತು ಸಮಾಲೋಚನಾ ಸಭೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಉಡುಪಿಯ ತ್ರಿಶಾ ವಿದ್ಯಾ ಕಾಲೇಜಿನ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ಮತ್ತು ಮೂಡಬಿದ್ರೆ ವಿಜಯ್ ಕುಮಾರ್ ಶೆಣೈ ಯವರು ವಯೋವಂದನ ಯೋಜನೆಯ ಕಟ್ಟಡ ನಿರ್ಮಾಣದ ಪೂರ್ವಭಾವಿ ಸಿದ್ಧತೆ, ಯೋಜನೆಯ ನಿರ್ವಹಣೆಯ ಖರ್ಚು ವೆಚ್ಚದ ವಿವರಗಳನ್ನು ದೃಶ್ಯ ಶ್ರಾವ್ಯ ಮಾಧ್ಯಮದ ಮೂಲಕ ವಿವರಿಸಿದರು.
ವಿವಿಧ ಸಮಿತಿಗಳ ರಚನೆ
ಇದೇ ಸಂದರ್ಭದಲ್ಲಿ ವಯೋವಂದನ ಕಟ್ಟಡ ನಿರ್ಮಾಣ ಯೋಜನೆಯ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಬೆಂಗಳೂರಿನ ಮಹಾಲಸಾ ಎಲೆಕ್ಟ್ರಿಕಲ್ ನ ಮಾಲಕರಾದ ಮೂಡಬಿದ್ರೆ ಶ್ರೀ ವಿಜಯಕುಮಾರ್ ಶೆಣೈ, ಸಂಚಾಲಕರಾಗಿ ಕಾಪು ಹರೀಶ್ ನಾಯಕ್, ಕೆ.ಸಿ. ಕಾಮತ್, ಹಣಕಾಸು ಸಮಿತಿ ಮತ್ತು ಲೆಕ್ಕಪತ್ರ ಮೇಲ್ವಿಚಾರಣ ಸಮಿತಿಯ ಅಧ್ಯಕ್ಷರಾಗಿ ಸಿಎ ಗೋಪಾಲಕೃಷ್ಣ ಭಟ್, ಗೌರವ ಸಲಹೆಗಾರರಾಗಿ ಸಿಎ ಎಸ್ಎಸ್ ನಾಯಕ್ ಮಂಗಳೂರು, ಮತ್ತು ಸಂಚಾಲಕರುಗಳಾಗಿ ನಾಗೇಶ್ ಕಾಮತ್ ಮತ್ತು ಮೋಹನದಾಸ ಶಾನುಭಾಗ್, ಕಟ್ಟಡ ನಿರ್ಮಾಣ ಸಾಮಗ್ರಿ ಸಂಗ್ರಹಣ ಮತ್ತು ಮೇಲ್ವಿಚಾರಣಾ ಸಮಿತಿ ಸಂಚಾಲಕರುಗಳಾಗಿ ಬೆಳ್ಮಣ್ ವೆಂಕಟರಾಯ ಕಾಮತ್ ಮತ್ತು ಮೂಡಬಿದ್ರೆ ರಘುವೀರ್ ಶೆಣೈ ಯ ವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು.
ಕಟ್ಟಡ ನಿರ್ಮಾಣ ಕೆಲಸದ ಗುತ್ತಿಗೆಯನ್ನು ಬೆಳ್ಮಣ್ ಕಾಮಾಕ್ಷಿ ಕನ್ಸ್ಟ್ರಕ್ಷನ್ ನ ಸುಧೀರ್ ಕಾಮತ್ ರವರಿಗೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಡಾ. ರಾಜ್ ಗೋಪಾಲ್ ಶೆಣೈ,ಉಡುಪಿ ಮತ್ತು ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರಾದ ಸಿಎ ಎಸ್ಎಸ್ ನಾಯಕ್ ರವರು ಮಾತನಾಡಿದರು.
ವೇದಿಕೆಯಲ್ಲಿ ಉಡುಪಿಯ ಖ್ಯಾತ ಸರ್ಜನ್ ಡಾ. ಸುರೇಶ್ ಶೆಣೈ, ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ವಿಶ್ವಸ್ಥರಾದ ಕೆ.ಕರಾಮರಾಯ ಕಿಣಿ, ಉಡುಪಿ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ವಿಶ್ವಸ್ಥರಾದ ಮಹೇಶ ಶೆಣೈ ,ಯುವಕ ಮಂಡಳಿಯ ಅಧ್ಯಕ್ಷರಾದ ನಿತೇಶ್ ಶೆಣೈ, ಮತ್ತು ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ಮಹಿಳಾ ಮಂಡಳಿಯ ಅಧ್ಯಕ್ಷರಾದ ಸೀಮಾ. ಎಸ್. ಪೈ ಯವರು ಉಪಸ್ಥಿತರಿದ್ದರು.
ಸನ್ಮಾನ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಪರಿಕಲ್ಪನೆ ಮತ್ತು ಸಂಯೋಜನೆಯಲ್ಲಿ ಸಿದ್ಧಗೊಂಡಿರುವ “ಡಾ .ಪಿ. ದಯಾನಂದ ಪೈ ಸಾರ್ಥಕ ಬದುಕಿನ ಸಾಕ್ಷಾತ್ಕಾರ ” ಎನ್ನುವ ಪುಸ್ತಕದ ಸಂಪಾದಕಿಯಾದ ಕಾರ್ಕಳದ ಪ್ರತಿಭಾನ್ವಿತ ಲೇಖಕಿ ಪ್ರಜ್ವಲಾ ಶೆಣೈಯವರಿಗೆ ಸನ್ಮಾನಿಸಿ, ಗೌರವಾರ್ಪಣೆ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವೇದಮೂರ್ತಿ ಶ್ರೀಚೇಂಪಿ ರಾಮಚಂದ್ರ ಅನಂತ ಭಟ್ಟರವರು, ವೇದಿಕೆಯ ಮಹತ್ವಕಾಂಕ್ಷಿ ಯೋಜನೆಗೆ ಸಮಾಜದ ದಾನಿಗಳಿಂದ ಈಗಾಗಲೇ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದ್ದು, ಆದಷ್ಟು ಶೀಘ್ರ ನಿರ್ಮಾಣ ಕಾರ್ಯ ಸಂಪೂರ್ಣಗೊಂಡು ಸಮಾಜದ ಹಿರಿಯರ ಬಾಳಿಗೆ ಈ ಯೋಜನೆ ಆಸರೆಯಾಗಲಿ ಎಂದು ಶುಭ ಹಾರೈಸಿದರು.
ಬಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಜಿ. ಸತೀಶ್ ಹೆಗಡೆ ಸ್ವಾಗತಿಸಿ ,ವೇದಿಕೆಯ ಸಂಚಾಲಕರಾದ ಆರ್. ವಿವೇಕಾನಂದ ಶೆಣೈಯವರು ಪ್ರಸ್ತಾವನೆಗೈದರು, ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ರಾಮತ್ ರವರು ಕಾರ್ಯಕ್ರಮ ನಿರೂಪಿಸಿ ,ಕಾಪು ಹರೀಶ್ ನಾಯಕ್ ರವರು ವಂದನಾರ್ಪಣೆಗೆದರು.

