ಮಂಗಳೂರಿನಲ್ಲಿ ಜುಲೈ 1ರಿಂದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ

0
8

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ (DKDTTA) ವತಿಯಿಂದ ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ (KTTA) ಆಶ್ರಯದಲ್ಲಿ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ–2026 ಅನ್ನು ಜುಲೈ 1ರಿಂದ 4ರವರೆಗೆ ಮಂಗಳೂರಿನ ಬಂಗ್ರಕೂಳೂರು, ಪಡುಕೋಡಿಯ ಮಂಗಳೂರು ಟೇಬಲ್ ಟೆನಿಸ್ ಅಕಾಡೆಮಿಯಲ್ಲಿ ಆಯೋಜಿಸಲಾಗಿದೆ.

ನಾಲ್ಕು ದಿನಗಳ ಈ ರಾಜ್ಯಮಟ್ಟದ ಟೂರ್ನಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 800ರಿಂದ 1,000ಕ್ಕೂ ಹೆಚ್ಚು ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ. ವಿಶ್ವ ಜೂನಿಯರ್ ಸರ್ಕ್ಯೂಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕೆಲ ಅಂತರರಾಷ್ಟ್ರೀಯ ಆಟಗಾರರು, ರಾಷ್ಟ್ರೀಯ ಶ್ರೇಯಾಂಕದ ಆಟಗಾರರು ಹಾಗೂ ರಾಷ್ಟ್ರೀಯ ಪದಕ ವಿಜೇತರೂ ಈ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ.

ಕಳೆದ ವರ್ಷ ದಕ್ಷಿಣ ಕನ್ನಡದಲ್ಲಿ ನಡೆದ ರಾಜ್ಯ ರ‍್ಯಾಂಕಿಂಗ್ ಟೂರ್ನಿಗೆ ದಾಖಲೆಯ 800ಕ್ಕೂ ಅಧಿಕ ಪ್ರವೇಶಗಳು ದೊರೆತಿದ್ದು, ಟೂರ್ನಿಯು ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ಇನ್ನಷ್ಟು ಭವ್ಯವಾಗಿ ಹಾಗೂ ರಾಜ್ಯ ಮಟ್ಟದಲ್ಲಿ ಹೊಸ ಮಾನದಂಡ ಸ್ಥಾಪಿಸುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಟೂರ್ನಿಯ ಆಯೋಜನೆಗೆ ಸುಮಾರು ₹10ರಿಂದ ₹12 ಲಕ್ಷ ವೆಚ್ಚ ಅಂದಾಜಿಸಲಾಗಿದ್ದು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಟಗಾರರನ್ನು ಪ್ರೋತ್ಸಾಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಹಾಗೂ ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ ಉಪಾಧ್ಯಕ್ಷ ಗೌತಮ್ ಶೆಟ್ಟಿ, ರಾಜ್ಯದ ಪ್ರತಿಷ್ಠಿತ ಟೇಬಲ್ ಟೆನಿಸ್ ಟೂರ್ನಿಗಳಲ್ಲಿ ಇದೂ ಒಂದಾಗಿದ್ದು, ಮಾಧ್ಯಮಗಳು ಉತ್ತಮ ಪ್ರಚಾರ ನೀಡುವ ಮೂಲಕ ಟೂರ್ನಿಯ ಯಶಸ್ಸಿಗೆ ಕೈಜೋಡಿಸಬೇಕೆಂದು ಕೋರಿದ್ದಾರೆ.

LEAVE A REPLY

Please enter your comment!
Please enter your name here