ಅಮೃತಭಾರತಿ ಕಾಲೇಜಿನಲ್ಲಿ ಗಾಂಧಿ–ಶಾಸ್ತ್ರಿ ಜಯಂತಿ ಆಚರಣೆ

0
36

ಹೆಬ್ರಿ : ಪಾಂಡುರಂಗರಮಣ ನಾಯಕ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಮೃತಭಾರತಿ ಪದವಿಪೂರ್ವ ಕಾಲೇಜು ಹೆಬ್ರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿ ಅವರು ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಮಹಾತ್ಮ ಗಾಂಧೀಜಿಯವರು ಬನಾರಸ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣದ ವಿಚಾರಗಳನ್ನು ಪುನರುಚ್ಚರಿಸಿದ ಅವರು, ಸ್ವಚ್ಛತೆ ನಮ್ಮ ನಿತ್ಯದ ಕಾಯಕವಾಗಬೇಕು. ಪ್ರತಿಯೊಬ್ಬರೂ ತಮ್ಮನ್ನು ತಾವೇ ಪೌರಕಾರ್ಮಿಕರೆಂದು ಭಾವಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಎಚ್. ಗುರುದಾಸ್ ಶೆಣೈ, ಗಾಂಧೀಜಿಯವರ ಆದರ್ಶಗಳು ವಿಶ್ವದ ಅನೇಕ ದೇಶಗಳಿಗೂ ಪ್ರೇರಣೆಯಾಗಿವೆ ಎಂದರು. ನುಡಿದಂತೆ ನಡೆದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಆದರ್ಶ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಅವರ ಗ್ರಾಮಸ್ವರಾಜ್ಯದ ಪರಿಕಲ್ಪನೆ ಅನುಕರಣೀಯವಾಗಿದ್ದು, ಸರಳತೆ ಮತ್ತು ದೇಶಸೇವೆಯ ವಿಚಾರಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಅನುಸೂಯ ಮಲ್ಯ ಅವರು ಗಾಂಧೀಜಿ ಹಾಗೂ ಶಾಸ್ತ್ರಿಯವರ ನೈತಿಕ ಮೌಲ್ಯಗಳು ಮತ್ತು ಜೀವನಾದರ್ಶಗಳ ಮಹತ್ವವನ್ನು ವಿವರಿಸಿದರು. ಶಾಸ್ತ್ರಿಯವರ ದೇಶಭಕ್ತಿಯ ಘೋಷಣೆಯನ್ನು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಯ ಸೇವೆಯ ಶ್ರೇಷ್ಠತೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಸಂಸ್ಥೆಯ ವತಿಯಿಂದ ಸ್ವಚ್ಛತಾ ಸಿಬ್ಬಂದಿಗೆ ಹೃದಯಸ್ಪರ್ಶಿ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಸತೀಶ್ ಪೈ, ಅಮೃತಭಾರತಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ರಾಜೇಶ್ ನಾಯಕ್, ಹಾಸ್ಟೆಲ್ ಸಮಿತಿ ಸದಸ್ಯರಾದ ಸುಧರ್ ನಾಯಕ್, ರಾಮಕೃಷ್ಣ ಆಚಾರ್, ಅಮೃತಭಾರತಿ ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ವಿದ್ಯಾಕೇಂದ್ರದ ಪ್ರಾಂಶುಪಾಲ ಅರುಣ್, ವಿದ್ಯಾಲಯದ ಮುಖ್ಯೋಪಾಧ್ಯಾಯ ಅರ್ಣ ಭಟ್, ಶಕುಂತಲಾ ಹಾಗೂ ಕ್ಯಾಂಪಸ್ ಮೇಲ್ವಿಚಾರಕ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಆಂಗ್ಲ ಭಾಷಾ ಉಪನ್ಯಾಸಕಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.