
ಮೂಡುಬಿದಿರೆ : ಕರ್ನಾಟಕ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಪ್ರಾಥಮಿಕ ವಿಭಾಗದ ಎರಡು ಸಂಘಗಳ ಪೈಕಿ ರಾಜ್ಯದ ಎರಡನೇ ಅತಿ ದೊಡ್ಡ ಸಂಘವೆಂದು ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯ (6–8) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.), ಬೆಂಗಳೂರು ಇದರ ಮೂಡುಬಿದಿರೆ ತಾಲೂಕು ಘಟಕದ 2026–31ನೇ ಸಾಲಿನ ಅವಧಿಗೆ ನಿರ್ದೇಶಕರ ಆಯ್ಕೆ ನಡೆಯಿತು.
ಸಂಘದ ರಾಜ್ಯ ಚುನಾವಣಾಧಿಕಾರಿಗಳು ಸೆಪ್ಟೆಂಬರ್ 20ರಂದು ಚುನಾವಣಾ ಅಧಿಸೂಚನೆ ಹೊರಡಿಸಿದ್ದರು. ಸಂಘದ ಬೈಲಾ ಹಾಗೂ ಚುನಾವಣಾ ಮಾರ್ಗಸೂಚಿಯಂತೆ ಮೂಡುಬಿದಿರೆ ತಾಲೂಕಿನಲ್ಲಿ 35ಕ್ಕೂ ಹೆಚ್ಚು GPT ಶಿಕ್ಷಕರ ಮತದಾರರು ಇರುವ ಹಿನ್ನೆಲೆಯಲ್ಲಿ ಏಳು ನಿರ್ದೇಶಕ ಸ್ಥಾನಗಳು ಲಭ್ಯವಾಗಿದ್ದವು.
ಸೆಪ್ಟೆಂಬರ್ 27ರಂದು ನಡೆದ ಚುನಾವಣೆಯಲ್ಲಿ ಏಳು ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. ದೊರೆಸ್ವಾಮಿ ಕೆ.ಎನ್., ಮಲ್ಲಿಕಾ, ಸಹನಾ ಷಣ್ಮುಖ ಮಡಗಾಂವ್ಕರ್, ಜಯಶ್ರೀ, ಪ್ರಶಾಂತ್ ಎನ್., ಶರಣಯ್ಯ ಹಾಗೂ ಭರತ್ ಕುಮಾರ್ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ತಾಲೂಕು ಚುನಾವಣಾಧಿಕಾರಿ ಹಾಗೂ ಸರ್ಕಾರಿ ಪ್ರೌಢಶಾಲೆ ಹೊಸಬೆಟ್ಟುವಿನ ನಿವೃತ್ತ ಮುಖ್ಯ ಶಿಕ್ಷಕರಾದ ಸುಭಾಶ್ಚಂದ್ರ ಅವರು ನೂತನ ನಿರ್ದೇಶಕರಿಗೆ ಪ್ರಮಾಣಪತ್ರ ವಿತರಿಸಿದರು.
ನೂತನ ನಿರ್ದೇಶಕರ ಪೈಕಿ ಶರಣಯ್ಯ ಅವರು ತಾಲೂಕು ಅಧ್ಯಕ್ಷರಾಗಿ, ಮಲ್ಲಿಕಾ ಅವರು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಭರತ್ ಕುಮಾರ್ ಎಸ್. ಅವರು ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
