ಮನೆಗೆ ಬಿಡುವ ನೆಪದಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ : 10 ಆರೋಪಿಗಳ ಬಂಧನ..!

0
16

ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 41 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಒಬ್ಬ ಅಪ್ರಾಪ್ತ ಸೇರಿದಂತೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜೂನ್ 3ರಂದು ರಾತ್ರಿ ನಡೆದ ಈ ಘಟನೆ ಕುರಿತು ಮಂಗಳವಾರ ಎಫ್‌ಐಆರ್ ದಾಖಲಾಗಿದ್ದು, ಬಂಧಿತರನ್ನು ಚಟಕಿ ನಾಗರಾಜ್, ಇಸ್ತ್ರೀ ನಾಗರಾಜ್, ಮಧು, ಅರ್ಜುನ, ಬಸವಂತ್, ಕುಂದೂರ ಮಾರುತಿ, ಮನು, ಜೋಗಿ ಸುನೀಲ ಹಾಗೂ ಪ್ರದೀಪ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಬೈಕ್‌ಗಳು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಿನಗೂಲಿ ಕಾರ್ಮಿಕೆಯಾಗಿರುವ ಮಹಿಳೆ ತನ್ನ ಪತಿಯೊಂದಿಗೆ ಜಗಳವಾಡಿ ರಾತ್ರಿ ವೇಳೆ ಒಂಟಿಯಾಗಿ ಊರಿಗೆ ತೆರಳುತ್ತಿದ್ದಾಗ, ಆರೋಪಿಗಳು ಮನೆಗೆ ಬಿಡುವುದಾಗಿ ನಂಬಿಸಿ ಬೈಕ್‌ನಲ್ಲಿ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಬಳಿಕ ತಂಪು ಪಾನೀಯದಲ್ಲಿ ನಿದ್ರಾಜನಕ ಬೆರೆಸಿ ಕುಡಿಸಿ ಕೃಷಿ ಭೂಮಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.

ಮರುದಿನ ಬೆಳಗ್ಗೆ ಎಚ್ಚರಗೊಂಡ ಮಹಿಳೆ ಮನೆಗೆ ಮರಳಿದ್ದರು. ನಂತರ ಆಕೆಯ ಆಕ್ಷೇಪಾರ್ಹ ಫೋಟೋ ಹಾಗೂ ವಿಡಿಯೋಗಳು ಮೊಬೈಲ್‌ಗಳಲ್ಲಿ ಹರಿದಾಡುತ್ತಿರುವ ವಿಚಾರ ತಿಳಿದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ಸಂಬಂಧ ಬಸವಪಟ್ಟಣ ಪೊಲೀಸರು ಸಾಮೂಹಿಕ ಅತ್ಯಾಚಾರ, ಆಕ್ಷೇಪಾರ್ಹ ಚಿತ್ರ-ವಿಡಿಯೋ ಪ್ರಸಾರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here