ನಯಂಪಳ್ಳಿ ಪಕ್ಕಿಬೆಟ್ಟು ಗರಡಿ ರಸ್ತೆಯ ಕಸ ವಿಲೇವಾರಿ : ಸತೀಶ್ ಪೂಜಾರಿ ಕೀಳಂಜೆ ಮನವಿಗೆ ಸ್ಪಂದಿಸಿದ ಪಂಚಾಯಿತಿ

0
9

ಉಡುಪಿ : ಕಲ್ಯಾಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಯಂಪಳ್ಳಿ ಪಕ್ಕಿಬೆಟ್ಟು ಗರಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ರಾಶಿ ಬಿದ್ದಿದ್ದ ಕಸ ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಲಾಗಿದೆ.

ಈ ರಸ್ತೆಯ ಬದಿಯಲ್ಲಿ ಹಲವು ಸಮಯಗಳಿಂದ ಕಸ ಮತ್ತು ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಸ್ಥಳೀಯ ನಿವಾಸಿಗಳು, ಸಾರ್ವಜನಿಕರು ಹಾಗೂ ಗರಡಿ ಮತ್ತು ಬಬ್ಬುಸ್ವಾಮಿ ದೇವಸ್ಥಾನಕ್ಕೆ ತೆರಳುವ ಭಕ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಕಸದ ರಾಶಿಯಿಂದಾಗಿ ಪರಿಸರ ಕಲುಷಿತಗೊಂಡು ದುರ್ವಾಸನೆಯ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.

ಈ ಸಮಸ್ಯೆಯನ್ನು ಗಮನಿಸಿದ ಸ್ಥಳೀಯರು ಸಾಮಾಜಿಕ ಕಾರ್ಯಕರ್ತ ಹಾಗೂ ಸಮಾಜಸೇವಕ ಸತೀಶ್ ಪೂಜಾರಿ ಕೀಳಂಜೆ ಅವರ ಗಮನಕ್ಕೆ ತಂದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ, ಸಮಸ್ಯೆಯ ಗಂಭೀರತೆಯನ್ನು ವಿವರಿಸಿದರು. ಅಲ್ಲದೆ, ಸಾರ್ವಜನಿಕರು ಮತ್ತು ಭಕ್ತರ ಹಿತದೃಷ್ಟಿಯಿಂದ ರಸ್ತೆಯ ಬದಿಯಲ್ಲಿದ್ದ ಕಸ ಹಾಗೂ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಈ ಸಮಸ್ಯೆಯನ್ನು ಪತ್ರಿಕೆಯಲ್ಲಿಯೂ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.

ಮನವಿಗೆ ಸ್ಪಂದಿಸಿದ ಕಲ್ಯಾಣಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಜೆಸಿಬಿ ಯಂತ್ರದ ಸಹಾಯದಿಂದ ಕಸ ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿ, ರಸ್ತೆಯ ಬದಿಯನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡರು. ಇದರಿಂದ ಸ್ಥಳೀಯರು ಹಾಗೂ ಭಕ್ತರಿಗೆ ಅನುಕೂಲವಾಗಿದೆ.

ಬಹುಕಾಲದಿಂದ ಸಮಸ್ಯೆ ಎದುರಿಸುತ್ತಿದ್ದ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆದಿರುವುದಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದು, ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಹಾಗೂ ಕಲ್ಯಾಣಪುರ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕಸ ಹಾಕುವುದನ್ನು ತಡೆಯಲು ಶಾಶ್ವತ ಕ್ರಮಕ್ಕೆ ಆಗ್ರಹ

ರಸ್ತೆಯ ಬದಿಯಲ್ಲಿ ಮತ್ತೆ ಕಸ ಸಂಗ್ರಹವಾಗದಂತೆ ತಡೆಯಲು ಆ ಪ್ರದೇಶದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವುದನ್ನು ನಿಷೇಧಿಸುವ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂಬುದು ಸ್ಥಳೀಯರ ಪ್ರಮುಖ ಬೇಡಿಕೆಯಾಗಿದೆ.

ಈ ನಿಟ್ಟಿನಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ನಗರಸಭೆಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು, ಪ್ರದೇಶದ ಸ್ವಚ್ಛತೆಯನ್ನು ಕಾಪಾಡಲು ಶಾಶ್ವತ ಪರಿಹಾರ ಒದಗಿಸಬೇಕೆಂದು ಸತೀಶ್ ಪೂಜಾರಿ ಕೀಳಂಜೆ ಅವರು ಸಾರ್ವಜನಿಕರ ಪರವಾಗಿ ಮನವಿ ಮಾಡಿದ್ದಾರೆ.