ಕೇಂದ್ರದ ಹೊಸ ನಿಯಮ ಪ್ರಕಾರ ಇನ್ಮುಂದೆ ಇಂಥ ಮನೆಗಳಿಗೆ ಎಲ್‌ಪಿಜಿ ಇಲ್ಲ..
ನವದೆಹಲಿ : ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ದೇಶದಾದ್ಯಂತ LPG ಗ್ಯಾಸ್ ಸಿಲಿಂಡರ್ ಸಮಸ್ಯೆ ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನ ಸರಿದೂಗಿಸಲು ಕೇಂದ್ರ ಸರ್ಕಾರ ಭಾರೀ ಪ್ರಯತ್ನ ನಡೆಸುತ್ತಿದ್ದು, ಇದರ ಬೆನ್ನಲ್ಲೇ ದೇಶವಾಸಿಗಳಿಗೆ ಖಡಕ್ ಆದೇಶವೊಂದನ್ನು ಜಾರಿ ಮಾಡಿದೆ.
ಅದರಂತೆ, ಇನ್ನು ಮುಂದೆ ಇಂತಹ LPG ಗ್ಯಾಸ್ ಬಳಕೆದಾರರಿಗೆ ಗ್ಯಾಸ್ ಸೌಲಭ್ಯವನ್ನ ರದ್ದುಮಾಡಲಾಗುವುದು ಎಂದು ತಿಳಿಸಿದೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ.
ದೇಶದ ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಕೆಯನ್ನು ಉತ್ತೇಜಿಸಲು, ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಅದರಂತೆ, ನಿಮ್ಮ ಪ್ರದೇಶದಲ್ಲಿ PNG ಸಂಪರ್ಕ ಲಭ್ಯವಿದ್ದು, ನೀವು ಅದನ್ನು ಪಡೆಯಲು ನಿರಾಕರಿಸಿದರೆ, ಮುಂದಿನ ಮೂರು ತಿಂಗಳೊಳಗೆ ನಿಮ್ಮ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಆದೇಶಿಸಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆದೇಶದ ಪ್ರಕಾರ, ಪಿಎನ್‌ಜಿ ಲಭ್ಯವಿರುವ ಕಡೆಗಳಲ್ಲಿ ಗ್ರಾಹಕರು ಮೂರು ತಿಂಗಳ ಅವಧಿಯೊಳಗೆ ಹೊಸ ಸಂಪರ್ಕ ಪಡೆಯಬೇಕು. ಇದರೊಂದಿಗೆ ವಸತಿ ಸಂಕೀರ್ಣಗಳು ಮತ್ತು ಮನೆಗಳಿಗೆ ಪಿಎನ್‌ಜಿ ಸಂಪರ್ಕ ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸಲು ಅಧಿಕಾರಿಗಳಿಗೂ ಸಹ ಸೂಚನೆ ನೀಡಲಾಗಿದೆ. ಇದೇ ವೇಳೆ, ಅರ್ಜಿಗಳನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸುವಂತಿಲ್ಲ. ಒಂದು ವೇಳೆ ಅನಗತ್ಯ ವಿಳಂಬ ಮಾಡಿದರೆ ಅಥವಾ ಅಸಹಕಾರ ತೋರಿದರೆ ಅಂತಹ ಸಂಕೀರ್ಣಗಳಿಗೆ ಎಲ್‌ಪಿಜಿ ಪೂರೈಕೆ ಸ್ಥಗಿತಗೊಳಿಸುವ ಎಚ್ಚರಿಕೆಯನ್ನ ಸಹ ನೀಡಲಾಗಿದೆ.
ಏತನ್ಮಧ್ಯೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಅಥವಾ ಪಿಎನ್‌ಜಿಆರ್‌ಬಿ ಈ ಇಡೀ ಪ್ರಕ್ರಿಯೆಯ ಉಸ್ತುವಾರಿ ವಹಿಸಲಿದ್ದು, ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳ್ಳುವುದನ್ನು ಖಚಿತಪಡಿಸಲಿದೆ. ಮುಂದುವರೆದು, ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ಈಗಾಗಲೇ PNG ಸಂಪರ್ಕ ಹೊಂದಿರುವವರು ತಮ್ಮ ಹಳೆಯ LPG ಸಿಲಿಂಡರ್‌ಗಳನ್ನು ಕೂಡಲೇ ಸರಂಡರ್ ಮಾಡಬೇಕೆಂದು ಸಹ ಕೇಂದ್ರ ಸರ್ಕಾರ ಸೂಚಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಭೀತಿ ಮತ್ತು ಜಾಗತಿಕ ಇಂಧನ ಸರಬರಾಜು ಸರಪಳಿಯಲ್ಲಿನ ಅಡಚಣೆಗಳಿಂದಾಗಿ ದ್ರವೀಕೃತ ಪೆಟ್ರೋಲಿಯಂ ಅನಿಲ ಅಥವಾ ಎಲ್‌ಪಿಜಿ ಆಮದು ಮಾಡಿಕೊಳ್ಳುವುದು ಕಷ್ಟಕರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶೀಯವಾಗಿ ಲಭ್ಯವಿರುವ ನೈಸರ್ಗಿಕ ಅನಿಲ ಬಳಕೆಯನ್ನು ಉತ್ತೇಜಿಸಲು ಸರ್ಕಾರ ಮುಂದಾಗಿದೆ.
ಇದೇ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಎಲ್‌ಪಿಜಿ ರೀಫಿಲ್ ಬುಕಿಂಗ್ ಅವಧಿಯ ಬದಲಾವಣೆ ವದಂತಿಗಳನ್ನು ತಳ್ಳಿಹಾಕಿರುವ ಕೇಂದ್ರ ಸರ್ಕಾರ, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅಥವಾ ಸಾಮಾನ್ಯ ಗ್ರಾಹಕರಿಗೆ ಸಿಲಿಂಡರ್ ಬುಕಿಂಗ್ ಮಾಡುವ ದಿನಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮದಂತೆ ನಗರ ಪ್ರದೇಶಗಳಲ್ಲಿ 25 ದಿನಗಳ ನಂತರ ಮತ್ತು ಗ್ರಾಮೀಣ ಭಾಗಗಳಲ್ಲಿ 45 ದಿನಗಳ ನಂತರ ಮರುಪೂರಣ ಬುಕಿಂಗ್ ಮಾಡಬಹುದಾಗಿದೆ. ದೇಶದಲ್ಲಿ ಇಂಧನ ಸಂಗ್ರಹ ಸಮರ್ಪಕವಾಗಿದ್ದು, ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಸರ್ಕಾರ ತಿಳಿಸಿದೆ.

