
ಮಂಗಳೂರು : ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ (ಸರಕಾರಿ) ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಮಹಾಸಭೆ ಸೆಪ್ಟೆಂಬರ್ 27 ರಂದು ಡಾ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಮದಾಸ್ ಗೌಡ ಅವರು ಮಾತನಾಡಿ ನಿಕಟ ಪೂರ್ವ ಅಧ್ಯಕ್ಷ ಕರ್ನಲ್ ನಿಟ್ಟೆ ಗುತ್ತು ಶರತ್ ಭಂಡಾರಿಯವರು ವಿವಿಧ ರೀತಿಯಲ್ಲಿ ಸುಮಾರು ಆರು ಲಕ್ಷಕ್ಕೂ ಹೆಚ್ಚು ಹಣವನ್ನು ನೀಡಿದ್ದಕ್ಕಾಗಿ ಅಭಿನಂದಿಸಿದರು. ಅದೇ ರೀತಿ ಲೋಹಿದಾಸ್ ಅವರು ವಿದ್ಯಾರ್ಥಿಗಳ ಮಧ್ಯಾಹ್ನ ಊಟದ ಯೋಜನೆಗಾಗಿ ದಾನಿಗಳಿಂದ, ಹಳೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಸುಮಾರು 5 ಲಕ್ಷ ರೂಪಾಯಿ ಹಣವನ್ನು ಕಾಲೇಜಿಗೆ ಹಸ್ತಾಂತರಿಸಿದ್ದನ್ನು ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಅವರು ಪ್ರತಿ ವರ್ಷ ನೀಡುತ್ತಿರುವ ಒಂದು ಬಂಗಾರದ ಪದಕಕ್ಕಾಗಿ ಅಭಿವಂದಿಸಿದರು. ರಮೇಶ್ ಕುಮಾರ್ ಅವರು ವಿದ್ಯಾರ್ಥಿ ವೇತನ ನೀಡಿ, ಕಾಲೇಜಿಗೆ ಅಗತ್ಯ ಇರುವ ಬೋರ್ವೆಲ್ ಕೊರೆಯಿಸಿ ನೀರಿನ ಕೊರತೆಯ ಕಾರ್ಯವನ್ನು ಪೂರೈಸಿದ ಬಗ್ಗೆ ಅಭಿನಂದಿಸಿದರು. ಅಲ್ಲದೆ ಮೇಲಿನ ಸದಸ್ಯರುಗಳೊಂದಿಗೆ ಇತರ ಸದಸ್ಯರುಗಳು ಕೂಡ ಸಹಕರಿಸಿ ಅತ್ಯಂತ ಹಳೆಯ ಕಟ್ಟಡದ ಸುರಕ್ಷತೆ, ಸೌಂದರ್ಯವನ್ನು ಉಳಿಸಿಕೊಡುತ್ತಿರುವುದಕ್ಕೆ ಧನ್ಯವಾದ ಸಲ್ಲಿಸಿದರು.

ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಕರ್ನಲ್ ನಿಟ್ಟೆ ಗುತ್ತು ಶರತ್ ಭಂಡಾರಿ, ಉಪಾಧ್ಯಕ್ಷ ಶ್ರೀನಿವಾಸ ನಾಯಕ್, ಕಾರ್ಯ ದರ್ಶಿ ಸುಭಾಶ್ಚಂದ್ರ ಕಣ್ವತೀರ್ಥ, ಉಪ ಕಾರ್ಯದರ್ಶಿ ಡಾ ವನಜಾ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ ರಾಮಕೃಷ್ಣ ಹಾಜರಿದ್ದರು. ವಿಶ್ವನಾಥ ಪಾಟೆಕರ್ ಕಾರ್ಯಕ್ರಮ ನಿರ್ವಹಿಸಿದರು.
