ಉಚ್ಚಿಲ ಅಪಘಾತ ದುರಂತ : ಅನಾಥ ಮಕ್ಕಳ ಭವಿಷ್ಯಕ್ಕಾಗಿ ತಾಯಿಯ ಆಭರಣ ಮರಳಿಸಲು ಮನವಿ..!

0
16

ಉಚ್ಚಿಲ: ಮಹಾಲಕ್ಷ್ಮಿ ದೇವಸ್ಥಾನ ಸಮೀಪ ಮೇ 8ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಮತಾ ಅವರ ಕುಟುಂಬಸ್ಥರು ಹಾಗೂ ಹಿತೈಷಿಗಳು ಸಾರ್ವಜನಿಕರಿಗೆ ಕಳಕಳಿಯ ಮನವಿ ಮಾಡಿದ್ದಾರೆ.

ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಮತಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ದುರಂತದಿಂದ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಘಟನೆಯ ಬಳಿಕ ಮೃತದೇಹದ ಮೇಲಿದ್ದ ಚಿನ್ನಾಭರಣಗಳು ಕಾಣೆಯಾಗಿರುವುದು ಕುಟುಂಬದ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ. ಅಪಘಾತದ ವೇಳೆ ಯಾರೋ ಕಿಡಿಗೇಡಿಗಳು ಮೃತೆಯ ಮೈಮೇಲಿದ್ದ ಆಭರಣಗಳನ್ನು ತೆಗೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಕಾಣೆಯಾದ ಆಭರಣಗಳಲ್ಲಿ ಒಂದು ಮಾಂಗಲ್ಯ ಸರ, ಒಂದು ಬಳೆ ಹಾಗೂ ಒಂದು ಉಂಗುರ ಸೇರಿವೆ. “ಆಭರಣಗಳು ಕೇವಲ ಬಂಗಾರವಲ್ಲ, ಅದು ಆ ಇಬ್ಬರು ಮಕ್ಕಳ ಭವಿಷ್ಯ ಮತ್ತು ಬದುಕಿನ ಆಸರೆ” ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

“ಯಾರು ಆಭರಣಗಳನ್ನು ತೆಗೆದುಕೊಂಡಿದ್ದೀರೋ, ದಯವಿಟ್ಟು ಆ ಮಕ್ಕಳ ಭವಿಷ್ಯವನ್ನು ನೆನಪಿಸಿಕೊಂಡು ಮಾನವೀಯತೆ ತೋರಿಸಿ. ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕೆಳಗಿನ ಸಂಖ್ಯೆಗೆ ಸಂಪರ್ಕಿಸಿ ಆಭರಣಗಳನ್ನು ಹಿಂತಿರುಗಿಸಿ” ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಂಪರ್ಕ ಸಂಖ್ಯೆ: 8217691857

ಮಮತಾ ಅವರ ಕುಟುಂಬಸ್ಥರು ಮತ್ತು ಹಿತೈಷಿಗಳು ಸಾರ್ವಜನಿಕರಲ್ಲಿ ಸಹಾನುಭೂತಿ ಹಾಗೂ ಸಹಕಾರ ಕೋರಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here