ಶಿರ್ತಾಡಿ : ಶಾಲಾ ಶಿಕ್ಷಣಕ್ಕೆ ಪೂರಕವಾಗಿ ಗುಣಮಟ್ಟದ ತರಬೇತಿ ನೀಡುವ ಉದ್ದೇಶದಿಂದ ಶಿರ್ತಾಡಿಯಲ್ಲಿ ‘ಪ್ರಕೃತಿ ಕೋಚಿಂಗ್ ಸೆಂಟರ್’ ಶುಭಾರಂಭಗೊಂಡಿದೆ. ಶಿರ್ತಾಡಿ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಇದು ಸಂತಸದ ಸುದ್ದಿಯಾಗಿದೆ.

ನೆಲ್ಲಿಕಾರು ಗ್ರಾಮದ ಬೋರುಗುಡ್ಡೆಯ ಕವಿತಾ ಪ್ರವೀಣ್ ಅವರ ನೇತೃತ್ವದಲ್ಲಿ ಆರಂಭಗೊಂಡಿರುವ ಈ ಕೋಚಿಂಗ್ ಸೆಂಟರ್, ಶಿರ್ತಾಡಿಯ ಡಾ. ಆಶೀರ್ವಾದ್ ಅವರ ಮಾಲೀಕತ್ವದ ಪ್ರಭಾ ಎನ್‌ಕ್ಲೇವ್‌ನಲ್ಲಿ ಕಾರ್ಯಾರಂಭ ಮಾಡಿದೆ. ಈಗಾಗಲೇ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಟ್ಯೂಷನ್ ಸೌಲಭ್ಯ ಒದಗಿಸಲಾಗುವುದು. ಶಾಲಾ ಸಮಯದ ನಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯವಾದ ಪೂರಕ ತರಬೇತಿ ನೀಡುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.
ವಿಶೇಷವಾಗಿ ಹೆಚ್ಚಿನ ಅಂಕಗಳ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳು ಹಾಗೂ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಅನುಭವಸಂಪನ್ನ ಶಿಕ್ಷಕರಿಂದ ವೈಯಕ್ತಿಕ ಗಮನದೊಂದಿಗೆ ತರಗತಿಗಳನ್ನು ನಡೆಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥೆ ಕವಿತಾ ಪ್ರವೀಣ್ ತಿಳಿಸಿದ್ದಾರೆ.
ಸತ್ಯಪುರ ಶ್ರೀ ಸತ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸತ್ಯನಾರಾಯಣ ತಂತ್ರಿಗಳು ದೀಪ ಬೆಳಗಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಿರ್ತಾಡಿ ಚರ್ಚ್‌ನ ಧರ್ಮಗುರುಗಳು, ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

