ಮಕ್ಕಳ ಸುಭದ್ರ ಭವಿಷ್ಯಕ್ಕೆ ಉತ್ತಮ ಪೋಷಕತ್ವ ಅಗತ್ಯ : ಡಾ. ವಿರೂಪಾಕ್ಷ ದೇವರಮನೆ

0
5

ಉಡುಪಿ : ಇಂದಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲುಗಳಿವೆ. ಪರಿಸರದ ವಿವಿಧ ಆಕರ್ಷಣೆಗಳ ಮಧ್ಯದಲ್ಲಿ ವಿದ್ಯಾರ್ಥಿಗಳು ಬದುಕಬೇಕಾಗಿದೆ. ಪೋಷಕರು ವಿದ್ಯಾರ್ಥಿಗಳ ಅಂತರಂಗವನ್ನು ಅರಿತುಕೊಳ್ಳುತ್ತಾ, ಅವರು ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ಸಹಕಾರವನ್ನು ನೀಡಬೇಕಾಗಿದೆ. ಯಾವ ಮಗುವಿಗೆ ತಂದೆ, ತಾಯಿಯ ಪ್ರೀತಿ, ಮಮತೆ, ವಿಶ್ವಾಸ ದೊರಕುವುದೋ, ಆ ಮಗು ಯಾವುದೇ ದುಷ್ಚಟಗಳಿಗೆ ಬಲಿಯಾಗುವುದಿಲ್ಲ.

ಆದುದರಿಂದ ಉತ್ತಮ ಪೋಷಕತ್ವದಿಂದ ಮಕ್ಕಳ ಭವಿಷ್ಯ ಸುಭದ್ರವಾಗಿ ರೂಪುಗೊಳ್ಳಲು ಸಾಧ್ಯ ಎಂದು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ ಇಲ್ಲಿಯ ಖ್ಯಾತ ಮನೋವೈದ್ಯ ಹಾಗೂ ಲೇಖಕಡಾ.ವಿರೂಪಾಕ್ಷ ದೇವರಮನೆ ಹೇಳಿದರು.

ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಕೇಶವ ಸಂಕಲ್ಪ ಸಭಾಂಗಣದಲ್ಲಿ ನಡೆದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ-ಪೋಷಕರ ಸಮಾವೇಶ ʻವಿವೇಕಸಂಕಲ್ಪ-2026ʼ ಇದರಲ್ಲಿʻಸುಗಮಪಾಲನೆಗೆಹೊಸ ತಲೆಮಾರಿನಸವಾಲುಗಳುʼ ಎಂಬವಿಷಯದ ಕುರಿತು ಪೋಷಕರನ್ನುದ್ದೇಶಿಸಿಮಾತನಾಡಿದರು.

ಹದಿವಯಸ್ಸು ಎನ್ನುವುದು ಒಬ್ಬ ವ್ಯಕ್ತಿಯ ಬೆಳವಣಿಗೆಯಲ್ಲಿ ಅತ್ಯಂತ ಸೂಕ್ಷ್ಮವಾದ ಹಂತ. ಈ ಹಂತದಲ್ಲಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಉಂಟಾದಲ್ಲಿ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳು ತಲೆದೋರಬಹುದು. ಮಗುವಿನ ಮನಸ್ಸಿನಲ್ಲಿ ಶಿಕ್ಷಕರ ಬಗ್ಗೆ ಗೌರವ ಮೂಡಿಸುವುದು ಪ್ರತಿಯೊಬ್ಬ ಹೆತ್ತವರ ಕರ್ತವ್ಯವಾಗಿದೆ. ಸಾಧ್ಯವಾದಷ್ಟು ಪೋಷಕರು ತಮ್ಮ ಕೆಲಸದ ಒತ್ತಡಗಳನ್ನು ಬದಿಗಿರಿಸಿ ಅವರ ಜತೆ ನಿರಂತರ ಸಂಪರ್ಕ, ಸಂವಹನವನ್ನು ಮಾಡಬೇಕು.

ಮಕ್ಕಳು ಮುಕ್ತವಾಗಿ ತಮ್ಮ ಭಾವನೆಗಳನ್ನು ಪೋಷಕರಲ್ಲಿ ಹಂಚಿಕೊಳ್ಳಬೇಕು. ಇಂತಹ ಪರಿಸರವನ್ನು ಪೋಷಕರು ಮಾತ್ರ ನಿರ್ಮಿಸಲು ಸಾಧ್ಯ. ಮಕ್ಕಳನ್ನು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರಿಸದೆ, ಸಮಾಜ ನೆನಪಿಡುವಂತಹ ಕಾರ್ಯಗಳನ್ನು ಮಾಡಿಸುವಲ್ಲಿ ಪೋಷಕರ ಬೆಂಬಲ ಅತೀ ಅಗತ್ಯವಾಗಿರುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ. ಇವರು ಮಾತನಾಡುತ್ತಾ ವಿವೇಕಾನಂದ ವಿದ್ಯಾಸಂಸ್ಥೆ ಸಮಾಜದಲ್ಲಿ ತನ್ನದೇ ಆದ ಛಾಪನ್ನುಮೂಡಿಸಿದೆ.

ಈ ಶಿಕ್ಷಣ ಸಂಸ್ಥೆಯ ಪ್ರಾರಂಭದ ಹಿಂದೆ ಒಂದು ಸಂಘಟನೆಯಿದೆ. ಆ ಸಂಘಟನೆ ಸಂಸ್ಥೆಯಿಂದ ಯಾವ ಲಾಭವನ್ನೂ ಅಪೇಕ್ಷಿಸದೆ ದುಡಿಯುತ್ತಿದೆ. ಭಾರತೀಯ ಆಚಾರ-ವಿಚಾರ, ಸಂಸ್ಕೃತಿಯ ಅಡಿಪಾಯದೊಂದಿಗೆ ತಲೆಯೆತ್ತಿದ ಸಂಸ್ಥೆಗೆ ಸುಮಾರು ಏಳಕ್ಕಿಂತಲೂ ಹೆಚ್ಚಿನ ರಾಜ್ಯಗಳಿಂದ ಇಪ್ಪತ್ತೇಳು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಸೇರ್ಪಡೆಗೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಪಿಯುಸಿಯು ಬಹಳ ನಿರ್ಣಾಯಕ ಹಂತವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರಜ್ಞಾವಂತ ಪೋಷಕರು ಈ ಸಂಸ್ಥೆಯನ್ನು ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 590 ಕ್ಕಿಂತ ಅಧಿಕ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಕಾಲೇಜಿನಲ್ಲಿ ಲಭ್ಯವಿರುವ ಜೆ.ಇ.ಇ, ಕೆ.ಸಿ.ಇ.ಟಿ, ನೀಟ್ ಪ್ರವೇಶ ಪರೀಕ್ಷೆಗಳ ತರಬೇತಿಯ ಮಾಹಿತಿಗಳನ್ನು ಹಾಗೂ ವಿದ್ಯಾರ್ಥಿಗಳ ಅಂಕಗಳನ್ನು ದಾಖಲಿಸುವ Edupi App ಕುರಿತಾದ ಮಾಹಿತಿಗಳನ್ನು ಉಪನ್ಯಾಸಕರಾದ ಭೀಮ ಭಾರಧ್ವಾಜ್ ಹಾಗೂ ಶ್ಯಾಮ್ ಪ್ರಸಾದ್ ನೀಡಿದರು.

ವಸತಿನಿಲಯದ ಮುಖ್ಯ ನಿಯಮಪಾಲಕರಾದ ಚೇತನ್ ವಸತಿನಿಲಯದ ನಿಯಮಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ವೈದೇಹಿ ಸಭಾಂಗಣದಲ್ಲಿ ಮುಂದಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿವರವಾದ ಸೂಚನೆಗಳನ್ನು ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಹರೀಶ್ ಶಾಸ್ತ್ರಿ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತಮಂಡಳಿ ಸದಸ್ಯರಾದ ವತ್ಸಲಾ ರಾಜ್ಞಿ ಹಾಗೂ ಡಾ.ಕೆ.ಎನ್. ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸರಸ್ವತೀ ವಂದನೆಯೊAದಿಗೆ ಪ್ರಾರಂಭಿಸಲಾಯಿತು. ಪ್ರಾಂಶುಪಾಲರಾದ ದೇವಿಚರಣ್ ರೈ. ಎಮ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿಯರಾದ ದಯಾಮಣಿ ಟಿ. ಕೆ ವಂದಿಸಿ, ಹರ್ಷಿತಾ ಪಿ. ನಿರೂಪಿಸಿದರು.

LEAVE A REPLY

Please enter your comment!
Please enter your name here