ಲಾರಿ ಡಿಕ್ಕಿ ಗೂಡ್ಸ್ ವಾಹನ ಚಾಲಕ ಸಾವು..!

0
30

ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿಯ ಅಂಡರ್‌ಪಾಸ್‌ನಲ್ಲಿ ಭಾನುವಾರ ಬೆಳಗಿನ ಜಾವ ನಿಲ್ಲಿಸಿದ್ದ ಲಾರಿಗೆ ಗೂಡ್ಸ್ ವಾಹನವೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ, ಗೂಡ್ಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕುಂದಾಪುರ ತಾಲೂಕಿನ ಕಟ್ಟಬೆಳ್ತೂರು ಗ್ರಾಮದ ನಿವಾಸಿ ಪ್ರಶಾಂತ್ ಪಿ. (28) ಮೃತಪಟ್ಟ ದುರ್ದೈವಿ. ಮೃತ ಪ್ರಶಾಂತ್ ಅವರು KA-14-D-1820 ನಂಬರಿನ ಗೂಡ್ಸ್ ಗಾಡಿಯಲ್ಲಿ ಬೆಂಗಳೂರಿನಿಂದ ಸಂತೆಕಟ್ಟೆಗೆ ಬಾಡಿಗೆ ಸಾಮಗ್ರಿಗಳನ್ನು ತರುತ್ತಿದ್ದರು. ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿಯ ಅಂಡರ್‌ಪಾಸ್ ಕೆಳಗೆ ಲಾರಿಯ ಚಾಲಕನು ಇತರ ವಾಹನ ಸವಾರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಿರ್ಲಕ್ಷ್ಯದಿಂದ ರಸ್ತೆಯಲ್ಲೇ ಲಾರಿಯನ್ನು ನಿಲ್ಲಿಸಿದ್ದ ಎನ್ನಲಾಗಿದೆ.

ಇದೇ ಮಾರ್ಗದಲ್ಲಿ ವೇಗವಾಗಿ ಬಂದ ಗೂಡ್ಸ್ ಟೆಂಪೋ ರಸ್ತೆಯಲ್ಲಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಗೂಡ್ಸ್ ಗಾಡಿಯ ಮುಂಭಾಗವು ಲಾರಿಯ ಹಿಂಬದಿಯೊಳಗೆ ಸಿಕ್ಕಿಹಾಕಿಕೊಂಡಿದ್ದು , ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮವಾಗಿ ತೀವ್ರ ಸ್ವರೂಪದ ಪೆಟ್ಟು ಬಿದ್ದ ಚಾಲಕ ಪ್ರಶಾಂತ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಲಾರಿ ಚಾಲಕನ ವಿರುದ್ಧ ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here