ಬಂಟ್ವಾಳ : ದೈವದ ತಂಬಿಲ ಕಾರ್ಯಕ್ರಮ ನಡೆಯುತ್ತಿದ್ದ ಮನೆಯಲ್ಲೇ ಯುವಕನೋರ್ವ ತನ್ನ ಚಿಕ್ಕಪ್ಪನನ್ನು ಬಿಯರ್ ಬಾಟಲಿಯಿಂದ ಇರಿದು ಕೊಲೆಗೈದ ಭೀಕರ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಮಧುಸೂದನ್ (38) ಎಂದು ಗುರುತಿಸಲಾಗಿದ್ದು, ಆರೋಪಿಯಾಗಿರುವ ರಾಹುಲ್ (23) ತನ್ನ ಅಣ್ಣ ಕೇಶವ ಪೂಜಾರಿ ಅವರ ಪುತ್ರನಾಗಿದ್ದಾನೆ.
ಕೇಶವ ಪೂಜಾರಿ ಅವರ ಮನೆಯಲ್ಲಿ ಭಾನುವಾರ ರಾತ್ರಿ ದೈವದ ತಂಬಿಲ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ರಾಹುಲ್ ಹಾಗೂ ಇತರ ಕೆಲವರು ಮನೆಯಿಂದ ಹೊರಭಾಗದಲ್ಲಿ ಮದ್ಯಪಾನ ಮಾಡಿ ಗದ್ದಲ ನಡೆಸುತ್ತಿದ್ದರು ಎನ್ನಲಾಗಿದೆ. ಇದನ್ನು ಮಧುಸೂದನ್ ಆಕ್ಷೇಪಿಸಿದಾಗ ಮಾತಿನ ಚಕಮಕಿ ಉಂಟಾಗಿದೆ.
ಕೋಪಗೊಂಡ ರಾಹುಲ್ ಕೈಯಲ್ಲಿದ್ದ ಬಿಯರ್ ಬಾಟಲಿಯನ್ನು ಒಡೆದು ಮಧುಸೂದನ್ ಅವರ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಮಧುಸೂದನ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆ ನಡೆದ ತಕ್ಷಣ ರಾಹುಲ್ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಮೃತ ಮಧುಸೂದನ್ ಅವಿವಾಹಿತರಾಗಿದ್ದು, ಇಲೆಕ್ಟ್ರಿಷಿಯನ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಆರೋಪಿ ರಾಹುಲ್ ಸ್ಥಳೀಯ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

