ವಿದ್ಯಾರ್ಥಿ ಸಮುದಾಯ ಮೌಲ್ಯಗಳಲ್ಲಿ ಬದುಕಬೇಕು: ಹೈಕೋರ್ಟ್ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ
ಬೆಂಗಳೂರು; ವಿದ್ಯಾರ್ಥಿ ಸಮುದಾಯ ಮೌಲ್ಯಗಳಲ್ಲಿ ಬದುಕಬೇಕು. ನ್ಯಾಯ ಶಕ್ತಿಯಲ್ಲಿ ಅಲ್ಲ, ಬುದ್ಧಿವಂತಿಕೆಯಲ್ಲಿದೆ. ಇದನ್ನು ವಿದ್ಯಾರ್ಥಿ ಸಮುದಾಯ ಅರ್ಥಮಾಡಿಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಹೇಳಿದ್ದಾರೆ.
ಎಂ.ಕೆ.ಪಿ.ಎಂ – ಆರ್.ವಿ.ಐ.ಎಲ್.ಎಸ್ ನಿಂದ ಆಯೋಜಿಸಲಾಗಿದ್ದ ಪದವಿ ದಿನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಲೇಜು ಜೀವನ “ಸುವರ್ಣಯುಗ”ವಾಗಿದೆ. ಕಾನೂನು ಪದವಿದರರಿಗೆ ಅನೇಕ ಅವಕಾಶಗಳಿವೆ. ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ನಿರ್ಣಾಯಕ ಪಾತ್ರವಹಿಸುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚರ್ಚಾ ಸ್ಪರ್ಧೆಗಳು ಅತ್ಯಂತ ಮಹತ್ವದ್ದಾಗಿವೆ. ತಮ್ಮಪ್ರತಿಭೆ ಹೊರಹೊಮ್ಮಲು ಇವು ಉತ್ತಮ ವೇದಿಕೆಗಳಾಗಿವೆ. ವಿದ್ಯಾರ್ಥಿಗಳು ಪ್ರಶ್ನಿಸುವ ಧೈರ್ಯವಂತಿಕೆಯನ್ನು ಬಳಸಿಕೊಳ್ಳಬೇಕು. ನ್ಯಾಯ, ತರ್ಕ, ಸಹಾನುಭೂತಿ ಎಂಬ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಆರ್.ವಿ. ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಡಾ. (ಹೆಚ್.ಸಿ.) ಎ.ವಿ.ಎಸ್. ಮೂರ್ತಿ ಸಂಸ್ಥೆಯ ಪ್ರಗತಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಕಳೆದ ಐದು ವರ್ಷಗಳಲ್ಲಿ ವಿದ್ಯಾರ್ಥಿಗಳು ತೋರಿದ ಶ್ರಮ, ನ್ಯಾಯ ಬುದ್ಧಿ, ಜವಾಬ್ದಾರಿ ಮತ್ತು ಸೇವಾಮನೋಭಾವವನ್ನು ಪ್ರಶಂಸಿಸಿದರು. ವಿದ್ಯಾರ್ಥಿಗಳು ಆಲೋಚನೆಗಳನ್ನು ಚರ್ಚಿಸಿ, ಊಹೆಗಳನ್ನು ಪ್ರಶ್ನಿಸಿ, ಸಾಂಸ್ಕೃತಿಕವಾಗಿ, ಸೃಜನಾತ್ಮಕವಾಗಿ ಮತ್ತು ಕಾನೂನು ದೃಷ್ಟಿಯಿಂದ ಸಮತೋಲನವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂ.ಕೆ.ಪಿ.ಎಂ – ಆರ್.ವಿ.ಐ.ಎಲ್.ಎಸ್ ಪ್ರಾಂಶುಪಾಲರಾದ ಅಂಜಿನಾರೆಡ್ಡಿ ಕೆ. ಆರ್, ಅಕಾಡೆಮಿ ಸಂಯೋಜಕರಾದ ಭವಾನಾಸಿ, ಹೈಕೋರ್ಟ್ ನ್ಯಾಯವಾದಿ ಸಾವಿತ್ರಮ್ಮ, ಖಜಾಂಚಿ ಹಾಗೂ ಟ್ರಸ್ಟಿ ಪಿ.ಎಸ್. ವೆಂಕಟೇಶ್ ಬಾಬು, ಆಡಳಿತ ಮಂಡಳಿ ಅಧ್ಯಕ್ಷ ಎನ್.ಆರ್. ನಂದೀಶ್, ಟ್ರಸ್ಟಿಗಳಾದ ಡಾ. ಪ್ರಕಾಶ್, ಮಾನಂಡಿರಾಮೇಶ್, ಎಸ್.ಎಂ. ಬಾಲಕೃಷ್ಣ ಮತ್ತಿತರರು ಉಪಸ್ಥತಿರಿದ್ದರು.