
ಮೂಡುಬಿದಿರೆ : ಕಡಂದಲೆ ಗ್ರಾಮದ ವಿದ್ಯಾಗಿರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ದೇಶಭಕ್ತಿಯ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯು ಶಾಲಾ ಆವರಣದಲ್ಲಿ ಸಾಗಿದ್ದು, ವಿದ್ಯಾರ್ಥಿಗಳ ಉತ್ಸಾಹ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಸಾಲ್ಯಾನ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರಗೀತೆ ಹಾಡಲಾಯಿತು. ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ಭಾಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಶೇಷವಾಗಿ ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಭಾಷಣ ಮಾಡಿದ್ದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ಶಾಲೆಯ ಕೊಡುಗೈ ದಾನಿಗಳಾದ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಸಂಸ್ಥೆಯ ಸಂಸ್ಥಾಪಕ ಸುನಿಲ್ ಮೆಂಡೋನ್ಸ ಮಾತನಾಡಿ, “ಇಂದಿನ ಮಕ್ಕಳು ಮುಂದಿನ ಶಕ್ತಿಶಾಲಿ ಭಾರತದ ಪ್ರಜೆಗಳು. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಯಾವುದೇ ಭೇದಭಾವವಿಲ್ಲದೆ ಶಿಕ್ಷಣದಲ್ಲಿ ಮುಂದೆ ಬರಬೇಕು. ಇಂದು ನಮ್ಮ ಶಾಲೆಯ ಮಕ್ಕಳು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಉತ್ತಮವಾಗಿ ಭಾಷಣ ಮಾಡಿರುವುದನ್ನು ನೋಡಿದಾಗ ಕನ್ನಡ ಮಾಧ್ಯಮದ ಮಕ್ಕಳು ಯಾವುದರಲ್ಲೂ ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ” ಎಂದರು.

ಅವರು ದೇಶದ ಸ್ವಾತಂತ್ರ್ಯದ ಮಹತ್ವ, ರಾಷ್ಟ್ರದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಹಾಗೂ ಉತ್ತಮ ಶಿಕ್ಷಣದ ಅಗತ್ಯತೆಯ ಕುರಿತು ಮಾತನಾಡಿ, ಮಕ್ಕಳು ಶಿಸ್ತು, ಸಮಯಪಾಲನೆ ಹಾಗೂ ದೇಶಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸುಚರಿತ ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿ, ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಪ್ರತಿಭಾ ಎನ್., ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಸಾಲ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ ಪೂಜಾರಿ, ವಿಲ್ಪ್ರೆಡ್ ದಾಂತಿಸ್, ಜೆಸಿಐನ ಸುರೇಂದ್ರ ಭಟ್, ಲಯನ್ಸ್ ಕ್ಲಬ್ ಅಲಂಗಾರು ಮಾಜಿ ಅಧ್ಯಕ್ಷ ಎಲ್.ಎನ್. ಅಮಿತ್ ಡಿಸಿಲ್ವ ಪಾಲಡ್ಕ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ಕೋಟ್ಯಾನ್ ಸೇರಿದಂತೆ ಶಿಕ್ಷಕರು, ಪೋಷಕರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಉತ್ಸಾಹ ಹಾಗೂ ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ನೆರವೇರಿತು
