ಹೆಬ್ರಿಯಲ್ಲಿ ಸೆ.5ರಂದು 2,500ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಭವ್ಯ ಶ್ರೀಕೃಷ್ಣ ಜನ್ಮಾಷ್ಟಮಿ ಶೋಭಾಯಾತ್ರೆ

0
23

ಹೆಬ್ರಿ : ಭಗವಾನ್ ಶ್ರೀಕೃಷ್ಣನ ಜನ್ಮಾಷ್ಟಮಿಯ ಪಾವನ ಶುಭ ಸಂದರ್ಭದಲ್ಲಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸೆಪ್ಟೆಂಬರ್ 5ರಂದು ಹೆಬ್ರಿಯಲ್ಲಿ ಭವ್ಯ ಶ್ರೀಕೃಷ್ಣ ಜನ್ಮಾಷ್ಟಮಿ ಶೋಭಾಯಾತ್ರೆ ಆಯೋಜಿಸಲಾಗಿದೆ.

ಅಮೃತ ಭಾರತಿ ವಿದ್ಯಾಲಯ (State), ಅಮೃತ ಭಾರತಿ ವಿದ್ಯಾಕೇಂದ್ರ (CBSE) ಹಾಗೂ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ 2,500ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಮೂರು ವಿವಿಧ ಸ್ಥಳಗಳಿಂದ ಶೋಭಾಯಾತ್ರೆ ಆರಂಭಗೊಳ್ಳಲಿದೆ.

ಶ್ರೀ ಅನಂತಪದ್ಮನಾಭ ದೇವಸ್ಥಾನ ಹೆಬ್ರಿ, ಬಂಟರ ಭವನ ಆಗುಂಬೆ ರಸ್ತೆ ಹೆಬ್ರಿ ಹಾಗೂ ಶ್ರೀ ಗಜಾನನ ಗೇರುಬೀಜ ಕಾರ್ಖಾನೆ, ಕುಚ್ಚೂರು ರಸ್ತೆ ಹೆಬ್ರಿಯಿಂದ ಮೆರವಣಿಗೆಗಳು ಹೊರಡಲಿವೆ. ಮೂರು ಮೆರವಣಿಗೆಗಳು ಹೆಬ್ರಿ ಪೇಟೆಯ ಮುಖ್ಯ ವೃತ್ತದಲ್ಲಿ ಒಂದಾಗಿ ಸೇರಿ ಮುಂದುವರಿಯಲಿವೆ.

ಹೆಬ್ರಿ ಮುಖ್ಯ ವೃತ್ತದಲ್ಲಿ ವಿಶೇಷ ಮೊಸರು ಕುಡಿಕೆ ಉತ್ಸವ ನಡೆಯಲಿದ್ದು, ಬಳಿಕ ಭವ್ಯ ಶೋಭಾಯಾತ್ರೆಯು ಅಮೃತ ಭಾರತಿ ಕ್ರೀಡಾಂಗಣ ತಲುಪಲಿದೆ. ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ, ಹುಲಿವೇಷ, ಯಕ್ಷಗಾನ, ಭಜನೆ, ಕೋಲಾಟ, ಜಾಗಟೆ, ಶಂಖನಾದ, ಮೊಸರು ಕುಡಿಕೆ ಸೇರಿದಂತೆ ವಿವಿಧ ಚಿತ್ತಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಶೋಭಾಯಾತ್ರೆಯಲ್ಲಿ ಪುಟ್ಟ ವಿದ್ಯಾರ್ಥಿಗಳು ಕೃಷ್ಣ, ಬಲರಾಮ, ಗೋಪಿ ಹಾಗೂ ರಾಧೆಯ ವೇಷ ಧರಿಸಿ ಭಾಗವಹಿಸಲಿದ್ದು, ವಿಶೇಷ ಆಕರ್ಷಣೆಯಾಗಲಿದ್ದಾರೆ. ಹೆಬ್ರಿಯ ನಾಗರಿಕರು ಶ್ರೀಕೃಷ್ಣದೇವರ ಭಾವಚಿತ್ರಕ್ಕೆ, ಭಗವದ್ಧ್ವಜಕ್ಕೆ ಹಾಗೂ ವೇಷಧಾರಿ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸುವಂತೆ ಅಮೃತ ಭಾರತಿ ಪರಿವಾರ ಮನವಿ ಮಾಡಿದೆ.

ಪೋಷಕರು ಹಾಗೂ ಹೆಬ್ರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಕೃಷ್ಣ ಜನ್ಮಾಷ್ಟಮಿ ಶೋಭಾಯಾತ್ರೆಯ ಸಂಭ್ರಮವನ್ನು ಹೆಚ್ಚಿಸುವಂತೆ ಅಮೃತ ಭಾರತಿ ಟ್ರಸ್ಟಿನ ಆಡಳಿತ ಮಂಡಳಿ ಮುಕ್ತ ಆಹ್ವಾನ ನೀಡಿದೆ.