ಪ್ರವಾಸೋದ್ಯಮ ಮತ್ತು ಕ್ರೀಡಾ ಇಲಾಖೆಯಿಂದ ಕಂಬಳಗಳ ಅನುದಾನ ಬಿಡುಗಡೆ : ದೇವಿಪ್ರಸಾದ್ ಶೆಟ್ಟಿ

0
17

ಮಂಗಳೂರು : ಕಂಬಳ ಇದೀಗ ರಾಜ್ಯ ಕ್ರೀಡೆಯಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಬಳಾಭಿಮಾನಿಗಳಿದ್ದು ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ಕರಾವಳಿ ಕರ್ನಾಟಕದ ಪ್ರವಾಸೋದ್ಯಮ ಉತ್ತೇಜನದಲ್ಲಿ ಕಂಬಳ ಕ್ರೀಡೆ ಪ್ರಾಮುಖ್ಯತೆಯನ್ನು ಹೊಂದಿದ್ದು ರಾಜ್ಯ ಸರಕಾರ ಕಂಬಳಕ್ಕೆ ರಾಜ್ಯ ಮಾನ್ಯತೆ ನೀಡಿದ್ದು, ಬಜೆಟ್ ನಲ್ಲಿ ಕಂಬಳಕ್ಕೆ 5 ಕೋಟಿ ರೂ. ಅನುದಾನ ನೀಡುವ ಬಗ್ಗೆ ಅವಿಭಜಿತ ಜಿಲ್ಲೆಯ ಶಾಸಕರುಗಳ ಮೂಲಕ ಕಂಬಳ ಸಮಿತಿ ನೀಡುರುವ ಮನವಿಗೆ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ಕೆ.ಶಿವಕುಮಾರ್ ರವರು ಭರವಸೆ ನೀಡಿರುತ್ತಾರೆಂದು ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಹಾಗೂ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಸಾಧು ಸನಿಲ್ ಜಂಟಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

2024-25ನೇ ಸಾಲಿನ್ನಲಿ ರೂ. 50 ಲಕ್ಷ, 2025-26ನೇ ಸಾಲಿನಲ್ಲಿ ಜರಗಿದ 23 ಕಂಬಳಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ 15 ಲಕ್ಷ ರೂ. ಅನುದಾನ ಮಂಜೂರುಗೊಂಡು ತಲಾ ರೂ. 5 ಲಕ್ಷ ದಂತೆ ಕಂಬಳ ಆಯೋಜಕರಿಗೆ ಸಂದಾಯವಾಗಿರುತ್ತದೆ. ಇದೀಗ 2026-27ನೇ ಸಾಲಿನಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅವಿಭಜಿತ ಜಿಲ್ಲೆಯ 20 ಕಂಬಳಗಳಿಗೆ ತಲಾ 2 ಲಕ್ಷದಂತೆ 40 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ಜಿಲ್ಲಾ ಕಂಬಳ ಸಮಿತಿಯ ಅನುಮೋದನೆಯೊಂದಿಗೆ ರಾಜ್ಯ ಕಂಬಳ ಅಸೋಸಿಯೇಷನ್ ಶಿಫಾರಸ್ಸಿನೊಂದಿಗೆ ಅನುದಾನ ದೊರಕಲಿದೆಂದರು. ಸರಕಾರ ಕಂಬಳಗಳಿಗೆ ವಿಶೇಷ ಆದ್ಯತೆ ನೀಡಿ ಅನುದಾನ ಬಿಡುಗಡೆಗೊಳಿಸಿರುವುದಕ್ಕೆ ರಾಜ್ಯ ಕಂಬಳ ಅಸೋಸಿಯೇಷನ್ ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯ ಕಂಬಳ ಅಸೋಸಿಯೇಶನ್ ಹಾಗೂ ಜಿಲ್ಲಾ ಕಂಬಳ ಸಮಿತಿ ಸಹಭಾಗಿತ್ವದಲ್ಲಿ ಸರಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮುಖಾಂತರ ಕಂಬಳದ ಯುವ ಓಟಗಾರರಿಗೆ, ಕೋಣ ಬಿಡಿಸುವವರಿಗೆ, ನಿಶಾನೆಯವರಿಗೆ, ತೀರ್ಪುಗಾರರಿಗೆ, ಬರಹಗಾರರಿಗೆ ವಿಶೇಷ ತರಬೇತು ನೀಡಲಾಗುವುದು. ಎಲ್ಲಾ ವಿಭಾಗದ ಕೋಣಗಳ ಓಟಗಾರರಿಗೆ, ವ್ಯಾಯಾಮ, ಯೋಗ, ನುರಿತ ತರಬೇತುದಾರರಿಂದ 10 ದಿನಗಳ ತರಬೇತಿ, ವಸತಿ ಎಲ್ಲಾ ಸೌಕರ್ಯಗಳನ್ನು ಉಚಿತವಾಗಿ ನೀಡಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಕಂಬಳ ಅಸೋಸಿಯೇಶನ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ “ಅರ್ಹತಾ ಪತ್ರ” ನೀಡಲಿದೆ. ಸೆ.6 ಆದಿತ್ಯವಾರ ಬೆಳಿಗ್ಗೆ 9.30 ರಿಂದ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಕರೆಯಲ್ಲಿ ರಾಜ್ಯ ಕಂಬಳ ಅಸೋಸಿಯೇಶನ್ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ ಮತ್ತು ಜಿಲ್ಲಾ ಸಮಿತಿ ಕಾರ್ಯದರ್ಶಿ ವಿದ್ಯಾರ್ಥಿ ಜೈನ್ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆಂದು ತಿಳಿಸಿದರು.

ಕಂಬಳಕ್ಕೆ ಕ್ರೀಡಾ ಇಲಾಖೆ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ಕಾರ್ಮಿಕ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮೂಲಕ ದೊರಕುವ ಸವಲತ್ತು ಗಳನ್ನು ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ. ತರಬೇತು ಕೇಂದ್ರ ಹಾಗೂ ಕಂಬಳ ಭವನ ನಿರ್ಮಾಣಕ್ಕೆ ಸರಕಾರಿ ಜಾಗ ಮಂಜೂರಾತಿ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಉಪಮುಖ್ಯಮಂತ್ರಿಗಳು ಕಂದಾಯ ಸಚಿವರಾದ ಡಾ| ಜಿ. ಪರಮೇಶ್ವರವರಿಗೆ ಬೇಡಿಕೆ ಸಲ್ಲಿಸಲಾಗಿದೆ.

ಪ್ರವಾಸೋದ್ಯಮ ಇಲಾಖೆ ಕಂಬಳವನ್ನು ಪ್ರವಾಸಿಗರಿಗೆ ಆಕರ್ಷಿಸಲು ಮತ್ತು ಪ್ರಚಾರಕ್ಕಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮತ್ತು ಮರವಂತೆ ಬೀಚಿನಲ್ಲಿ ಕಂಬಳದ ಬೃಹತ್ ಪ್ರಾತ್ಯಕ್ಷಿಕೆಯನ್ನು ಅಳವಡಿಸಲು ಕ್ರಮ ಜರಗಿಸಿದ್ದಾರೆ. ಮಂಗಳೂರು ನಗರದಲ್ಲಿ ಕಂಬಳ ಸರ್ಕಲ್ ನಿರ್ಮಾಣಕ್ಕೆ ಮಹಾನಗರ ಪಾಲಿಕೆಗೆ ಮನವಿ ನೀಡಲಾಗಿದೆಂದರು.

ಮೈಸೂರು ಕಂಬಳ ಖಚಿತ : ಕಂಬಳ ರಾಜ್ಯ ಕ್ರೀಡೆಯಾಗಿದ್ದು, ರಾಜ್ಯದಾದ್ಯಂತ ಕಂಬಳಾಭಿಮಾನಿಗಳ ಕಂಬಳದ ವಿಶೇಷ ಗೌರವದ ಮತ್ತು ಸಾಹಸದ ಕ್ರೀಡೆ ಎಂದು ಅಭಿನಂದಿಸುತ್ತಿದ್ದಾರೆ. ಮೈಸೂರಿನಲ್ಲಿ ನಡೆಯುವ ನಾಡಹಬ್ಬ ದಸರಾದಲ್ಲಿ ಅ 18, 19ಕ್ಕೆ ಕಂಬಳ ಅದ್ದೂರಿಯಾಗಿ ಜರಗಲಿದೆ. ಇದು ರೈತರ, ಸಾಮಾನ್ಯ ಜನರ ಕ್ರೀಡೆ. ಕೃಷಿ ಮತ್ತು ಮಳೆ ಬೆಳೆಗೂ ಕಂಬಳಕ್ಕೂ ಅವಿನಾಭಾವ ಸಂಬಂಧವಿದೆ. ಕರಾವಳಿಯ ಗದ್ದೆಯಲ್ಲಿ ನಡೆಯುವ ಕಂಬಳದಿಂದಾಗಿ ಕೃಷಿ ಫಲವತ್ತಾಗಿದ್ದು, ಯಾವತ್ತು ನೀರಿನ ಬರ ಬಂದಿಲ್ಲವೆಂದು ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಹಾಗೂ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರಾದ ಚಂದ್ರಹಾಸ ಸಾಧು ಸನಿಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.