ತುಳುವ ಮಹಾಸಭೆ ಇಂಟರ್ನ್ಯಾಷನಲ್ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷರಾಗಿ ಹರೀಶ್ ಶೆಟ್ಟಿ ಪಡುಬಿದ್ರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾಕರ್ ಎಸ್. ಹೆಗ್ಡೆ, ಹೆಪ್ಪಳ ನೇಮಕ

0
39

ಮುಂಬೈ, : 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷರಾಗಿ ಹಿರಿಯ ಸಮಾಜಸೇವಕ, ಯಶಸ್ವಿ ಸಂಘಟಕ ಹಾಗೂ ಉದ್ಯಮಿ ಶ್ರೀ ಹರೀಶ್ ಶೆಟ್ಟಿ ಪಡುಬಿದ್ರಿ ಅವರನ್ನು ಹಾಗೂ ಮಹಾರಾಷ್ಟ್ರ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಸಮಾಜಸೇವಕ ಮತ್ತು ಸಂಘಟಕರಾದ ಶ್ರೀ ಪ್ರಭಾಕರ್ ಎಸ್. ಹೆಗ್ಡೆ, ಹೆಪ್ಪಳ ಅವರನ್ನು ನೇಮಕ ಮಾಡಲಾಗಿದೆ.

ಪಡುಬಿದ್ರಿಯವರಾದ ಹರೀಶ್ ಶೆಟ್ಟಿ ಅವರು ಸಿಂಗರ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ ಶಾಖಾ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮ (LIC)ನ ಹಿರಿಯ ಸಲಹೆಗಾರರಾಗಿದ್ದಾರೆ. ಕಳೆದ 15 ವರ್ಷಗಳಿಂದ MDRT ಕ್ಲಬ್ ಸದಸ್ಯರಾಗಿರುವ ಅವರು ತುಳುಕೂಟ ಐರೋಲಿ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾಗಿದ್ದು, ಅಧ್ಯಕ್ಷರಾಗಿ ಯಕ್ಷಗಾನ, ನಾಟಕ, ಸಂಗೀತ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. “ವಿದ್ಯಾನಿಧಿ ಕುಂಭ” ಯೋಜನೆಯ ಮೂಲಕ ಸುಮಾರು ₹50 ಲಕ್ಷ ಸಂಗ್ರಹಿಸಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಐರೋಲಿ ಅಧ್ಯಕ್ಷರಾಗಿ ಸುಮಾರು ₹55 ಲಕ್ಷ ವೆಚ್ಚದಲ್ಲಿ ಸಭಾಭವನ ಹಾಗೂ ಶಿಬಿರದ ನವೀಕರಣ ಕಾರ್ಯವನ್ನು ಪೂರ್ಣಗೊಳಿಸಿದ್ದು, ಬಂಟರ ಸಂಘ ಮುಂಬೈ – ನವಿಮುಂಬೈ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರಾಗಿ ಎರಡು ವರ್ಷಗಳ ಕಾಲ ಅತ್ಯುತ್ತಮ ಪ್ರಾದೇಶಿಕ ಸಮಿತಿಯ ಪ್ರಶಸ್ತಿ ದೊರಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಪ್ರಸ್ತುತ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಲ್, ಘನ್ಸೋಲಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದು ಮಂದಿರ ಪುನರನಿರ್ಮಾಣ ಕಾರ್ಯದಲ್ಲಿ, ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ .

ಪ್ರಭಾಕರ್ ಎಸ್. ಹೆಗ್ಡೆ, ಹೆಪ್ಪಳ ಅವರು ಶ್ರೀ ಅಯ್ಯಪ್ಪ ಭಕ್ತ ವೃಂದ ಚಾರಿಟೇಬಲ್ ಟ್ರಸ್ಟ್, ನೆರುಲ್ನ ಮಾಜಿ ಅಧ್ಯಕ್ಷರು, ರಂಗಭೂಮಿ ಫೈನ್ ಆರ್ಟ್ಸ್, ನವಿ ಮುಂಬೈಯ ಮಾಜಿ ಕಾರ್ಯದರ್ಶಿ, ಶ್ರೀ ಶನೀಶ್ವರ ದೇವಸ್ಥಾನ, ನೆರುಲ್ನ ಟ್ರಸ್ಟಿ ಹಾಗೂ ಹೆಗ್ಗಡೆ ಸೇವಾ ಸಂಘ (ರಿ.), ಮುಂಬೈಯ ಮಾಜಿ ಕಾರ್ಯದರ್ಶಿಯಾಗಿ ಹಲವು ವರ್ಷಗಳಿಂದ ಸಮಾಜಸೇವೆ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರಿಬ್ಬರ ಸಂಘಟನಾ ಅನುಭವ, ಸಮಾಜಸೇವೆ ಹಾಗೂ ತುಳು ಭಾಷೆ, ಸಂಸ್ಕೃತಿ ಮತ್ತು ಸಮುದಾಯದ ಅಭಿವೃದ್ಧಿಯ ಮೇಲಿನ ಬದ್ಧತೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಅಂತರರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕೇಂದ್ರೀಯ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ, ಕರ್ನಾಟಕ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹಾಗೂ ಪ್ರಧಾನ ಕಾರ್ಯದರ್ಶಿ ಅರವಿಂದ ಬೆಳ್ಚಾಡ ಅವರು ಕ್ರಮವಾಗಿ ಹರೀಶ್ ಶೆಟ್ಟಿ ಪಡುಬಿದ್ರಿ ಅವರನ್ನು ಮಹಾರಾಷ್ಟ್ರ ರಾಜ್ಯ ಅಧ್ಯಕ್ಷರಾಗಿ ಹಾಗೂ ಪ್ರಭಾಕರ್ ಎಸ್. ಹೆಗ್ಡೆ, ಹೆಪ್ಪಳ ಅವರನ್ನು ಮಹಾರಾಷ್ಟ್ರ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಿದ್ದಾರೆ.

2028ರ ಶತಮಾನೋತ್ಸವದ ಅಂಗವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ತುಳುವ ಮಹಾಸಭೆಯ ಸಂಘಟನೆಯನ್ನು ಬಲಪಡಿಸುವುದು, ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರಚಾರ, ಹೊಸ ಘಟಕಗಳ ರಚನೆ, ಯುವಜನರನ್ನು ಸಂಘಟಿಸುವುದು ಹಾಗೂ ಮಹಾರಾಷ್ಟ್ರದಾದ್ಯಂತ ತುಳುವ ಸಮುದಾಯವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಈ ನೇಮಕ ಮಹತ್ವದ ಹೆಜ್ಜೆಯಾಗಿದೆ.

ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್ನ ಗೌರವಾಧ್ಯಕ್ಷ ಶ್ರೀ ಶ್ರೀ ಹರಿನಾರಾಯಣ ದಾಸ ಅಸ್ರಣ್ಣ, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೇತ್ತೂರು ಹಾಗೂ ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಅವರು ಹರ್ಷದಿಂದ ಸ್ವಾಗತಿಸಿ, ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.