ಕುಶಾಲನಗರ : ಪುರಸಭೆ ಕಚೇರಿ ಆವರಣದಲ್ಲಿ ಸೃಷ್ಟಿಯಾಗಿರುವ ಅಪಾಯಕಾರಿ ಹೊಂಡಕ್ಕೆ ಇಂದು ಕಾರೊಂದು ಬಿದ್ದು ಸಿಲುಕಿಕೊಂಡಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.

ಸುಮಾರು 7.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡು ಕೇವಲ ಒಂದು ವರ್ಷದೊಳಗೆ ಚರಂಡಿಯ ಕಬ್ಬಿಣದ ಗ್ರಿಲ್‌ಗಳು ಮುರಿದು ಬಿದ್ದಿವೆ. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕಾರ್ಯಕರ್ತರು ಇತ್ತೀಚೆಗಷ್ಟೇ ಫೋಟೋ ಮತ್ತು ವಿಡಿಯೋ ದಾಖಲೆಗಳ ಸಮೇತ ಅಧಿಕಾರಿಗಳಿಗೆ ಖುದ್ದಾಗಿ ತಿಳಿಸಿ, ತಕ್ಷಣ ದುರಸ್ತಿ ಮಾಡುವಂತೆ ಎಚ್ಚರಿಸಿದ್ದರು.

ಆದರೆ, ಕಣ್ಣೆದುರೇ ಹೊಂಡವಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಇಂದು ಈ ದುರಂತ ಸಂಭವಿಸಿದೆ. ದಿನನಿತ್ಯ ನೂರಾರು ಸಾರ್ವಜನಿಕರು ಬಂದು ಹೋಗುವ ಜಾಗದಲ್ಲೇ ಈ ಅವಾಂತರವಿದ್ದು, ಮುಂದಾಗುವ ಪ್ರಾಣಾಪಾಯಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪುರಸಭೆ ಆಡಳಿತ ತಕ್ಷಣವೇ ಎಚ್ಚೆತ್ತು ಗಟ್ಟಿಯಾದ ಗ್ರಿಲ್ ಅಳವಡಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಕರವೇ ಸ್ವಾಭಿಮಾನಿ ಬಣ ಎಚ್ಚರಿಸಿದೆ.

