ತುಳುವೇಶ್ವರಿ ಸಾನಿಧ್ಯದ ಪುನರ್ವೈಭವಕ್ಕೆ 22 ಸೆಂಟ್ಸ್ ಭೂಮಿ ದಾನಕ್ಕೆ ವಾರಿಸುದಾರರ ಭರವಸೆ

0
40

ಬಸ್ರೂರು : ಜೂನ್ 14ರಂದು ನಡೆಯಲಿರುವ ತುಳುವೇಶ್ವರಿ (ಮುಳಲ) ಸಾನಿಧ್ಯದ ಅಷ್ಟಮಂಗಲ ಪ್ರಶ್ನೆ ಚಿಂತನೆಯ ಹಿನ್ನೆಲೆಯಲ್ಲಿ, ಬಸ್ರೂರಿನ ತುಳುವೇಶ್ವರಿ ಸಾನಿಧ್ಯದಲ್ಲಿ ಸ್ಥಳ ಪರಿಶೀಲನೆ ಹಾಗೂ ವಿಶೇಷ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ತುಳುವೇಶ್ವರಿ ಸಾನಿಧ್ಯದ ಪ್ರಸ್ತುತ ವಾರಿಸುದಾರರಾದ ಪ್ರಶಾಂತ್ ಪ್ರಭು ಹಾಗೂ ಸುಭಾಷ್ ಚಂದ್ರ ಶೆಟ್ಟಿ ಅವರು ಉಪಸ್ಥಿತರಿದ್ದು, ತುಳುನಾಡಿನ ಈ ಪ್ರಾಚೀನ ಶಕ್ತಿ ಸಾನಿಧ್ಯದ ಪುನರುಜ್ಜೀವನ ಮತ್ತು ಅಭಿವೃದ್ಧಿಗಾಗಿ ಸುಮಾರು 22 ಸೆಂಟ್ ಭೂಮಿಯನ್ನು ದಾನ ರೂಪದಲ್ಲಿ ನೀಡಲು ಸಿದ್ಧರಾಗಿರುವುದಾಗಿ ಭರವಸೆ ನೀಡಿದರು. ಇದೇ ವೇಳೆ, ಇವರನ್ನು ದೇವಸ್ಥಾನದ ಟ್ರಸ್ಟ್ ಮತ್ತು ಆಡಳಿತ ಸಮಿತಿಯಲ್ಲಿ ಟ್ರಸ್ಟಿಗಳಾಗಿ ಸೇರಿಸಿಕೊಳ್ಳುವುದಾಗಿ ಸಮಿತಿಯಿಂದ ಭರವಸೆ ನೀಡಲಾಯಿತು.

ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ದೈವಜ್ಞ ಜ್ಯೋತಿಷ್ಯ ತಿಲಕಂ ಶಶಿಧರ ಮಾಂಗಡ್ ಅವರ ಸಮ್ಮುಖದಲ್ಲಿ ದೊರೆತ ದೈವಸಂದೇಶದಂತೆ, ಶ್ರೀಚಕ್ರ ಸಾನಿಧ್ಯ ಹೊಂದಿರುವ ತುಳುವೇಶ್ವರಿ (ಮುಳಲ) ಸಾನಿಧ್ಯದ ಜೀವನೋದ್ಧಾರ ಮತ್ತು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಾಗಿದೆ. ತುಳುವೇಶ್ವರ ಮತ್ತು ತುಳುವೇಶ್ವರಿ ಸಾನಿಧ್ಯಗಳು ಒಂದೇ ಆಧ್ಯಾತ್ಮಿಕ ಪರಂಪರೆಯ ಎರಡು ಕೇಂದ್ರಗಳಾಗಿದ್ದು, ತುಳುವೇಶ್ವರಿ ಸಾನಿಧ್ಯದ ಪುನರ್‌ಸ್ಥಾಪನೆಯ ಬಳಿಕವೇ ತುಳುವೇಶ್ವರನ ಪುನರ್ವೈಭವ ಕಾರ್ಯಗಳು ಪೂರ್ಣ ಫಲಪ್ರದವಾಗಲಿವೆ ಎಂದು ಪ್ರಶ್ನೆಯಲ್ಲಿ ಸೂಚನೆ ದೊರೆತಿದೆ.

ಅಷ್ಟಮಂಗಲ ಪ್ರಶ್ನೆಯ ವೇಳೆ ಮತ್ತೊಂದು ಮಹತ್ವದ ಸಂಗತಿಯೂ ಬೆಳಕಿಗೆ ಬಂದಿದ್ದು, ತುಳುವೇಶ್ವರಿ ಸಾನಿಧ್ಯದಲ್ಲಿ ಪ್ರಾಚೀನ ಕಾಲದಲ್ಲಿ ಅತ್ಯಂತ ಶಕ್ತಿಯುತವಾದ ಮೇರು ಶ್ರೀಚಕ್ರ ಆರಾಧನೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಕಾಲಕ್ರಮೇಣ ಈ ಶ್ರೀಚಕ್ರವು ನೇಪಾಳ ದೇಶಕ್ಕೆ ಸ್ಥಳಾಂತರಗೊಂಡಿದೆ ಎಂಬ ದೈವಸಂದೇಶವೂ ಲಭಿಸಿದ್ದು, ಭವಿಷ್ಯದಲ್ಲಿ ಅದರ ಕುರಿತು ಹೆಚ್ಚಿನ ಅಧ್ಯಯನ ಮತ್ತು ಅನ್ವೇಷಣೆ ನಡೆಸಬೇಕೆಂದು ಸೂಚಿಸಲಾಗಿದೆ. ಶ್ರೀಚಕ್ರ ಪರಂಪರೆಯ ಮರುಸ್ಥಾಪನೆಯು ತುಳುನಾಡಿನ ಆಧ್ಯಾತ್ಮಿಕ ಪುನರುಜ್ಜೀವನಕ್ಕೆ ಹೊಸ ದಿಕ್ಕು ನೀಡಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ತುಳುವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಚ್. ಕೆ. ದೇವಾನಂದ ಶೆಟ್ಟಿ, ಸಂಚಾಲಕ ಬೇಲೂರು ದಿನಕರ ಶೆಟ್ಟಿ, ಖಜಾಂಜಿ ವಿನಯ ಆರ್. ಆಳ್ವ, ವಕೀಲೆ ಶರ್ಮಿಳಾ ಯೋಗೀಶ್ ಆಚಾರ್ಯ, ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಆಳ್ವ, ಪ್ರಧಾನ ಕಾರ್ಯದರ್ಶಿ ವಸಂತ ರೈ ಕುತ್ತೆತ್ತೂರು, ತುಳುವ ಮಹಾಸಭೆ ಇಂಟರ್ನ್ಯಾಷನಲ್ ಸಂಚಾಲಕಿ ಭಾನುಮತಿ ಶೆಟ್ಟಿ ಕಕ್ವಗುತ್ತು ಹಾಗೂ ತುಳುವೇಶ್ವರ ದೇವಸ್ಥಾನದ ದಿನೇಶ್ ಕಿಣಿ ಉಪಸ್ಥಿತರಿದ್ದರು.

ಜೂನ್ 14ರಂದು ನಡೆಯಲಿರುವ ಅಷ್ಟಮಂಗಲ ಪ್ರಶ್ನೆ ಚಿಂತನೆಯು ತುಳುವೇಶ್ವರಿ ಸಾನಿಧ್ಯದ ಪುನರ್ವೈಭವದ ದಿಕ್ಕಿನಲ್ಲಿ ಮಹತ್ವದ ಘಟ್ಟವಾಗಲಿದ್ದು, ಈ ಸಂದರ್ಭದಲ್ಲಿ ದೊರೆಯುವ ದೈವಿಕ ಮಾರ್ಗದರ್ಶನದ ಆಧಾರದಲ್ಲಿ ಮುಂದಿನ ಅಭಿವೃದ್ಧಿ ಕಾರ್ಯಗಳನ್ನು ರೂಪಿಸಲಾಗುವುದು ಎಂದು ಸಮಿತಿ ತಿಳಿಸಿದೆ. ಈ ಭೂದಾನದ ಮೂಲಕ ತುಳುವೇಶ್ವರಿ ಸಾನಿಧ್ಯದ ಜೀರ್ಣೋದ್ಧಾರ, ಶ್ರೀಚಕ್ರ ಸಾನಿಧ್ಯದ ಪುನರ್‌ಅಧ್ಯಯನ, ಆರಾಧನಾ ಕೇಂದ್ರ ನಿರ್ಮಾಣ ಹಾಗೂ ಸಮಗ್ರ ಪುನರ್ವೈಭವ ಕಾರ್ಯಗಳಿಗೆ ಬಲ ದೊರೆಯಲಿದ್ದು, ಈ ಮಹತ್ಕಾರ್ಯಕ್ಕೆ ಮುಂದಾಗಿರುವ ವಾರಿಸುದಾರರಾದ ಪ್ರಶಾಂತ್ ಪ್ರಭು ಮತ್ತು ಸುಭಾಷ್ ಚಂದ್ರ ಶೆಟ್ಟಿ ಅವರಿಗೆ ಸಮಿತಿಯ ವತಿಯಿಂದ ಕೃತಜ್ಞತೆ ಸಲ್ಲಿಸಿ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here