ಮಣಿಪಾಲ : ಕಿಂಗ್ ಆಫ್ ಆಕ್ಷನ್ ಎಂದೇ ಖ್ಯಾತರಾಗಿರುವ ಅರ್ಜುನ್ ದೇವ್ (ಕಾಪಿಕಾಡ್) ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ **‘ಟಾಸ್’**ನಿಂದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ನಾಯಕ–ನಾಯಕಿಯ ನಡುವಿನ ಪ್ರೇಮವನ್ನು ಬಿಂಬಿಸುವ ಈ ಲವ್ ಸಾಂಗ್ ಸುಮಧುರವಾಗಿ ಮೂಡಿಬಂದಿದ್ದು, ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.
ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಿದೆ. ‘ಮಲ್ಲಿಗೆದ ಸಾಲ್ ಸಾಲ್’ ಎಂಬ ತುಳು ಹಾಡು ಹಾಗೂ ‘ಹೆಲೋ ಹೆಲೋ ನೀಲಾಂಬರಿ’ ಎಂಬ ಕನ್ನಡ ಹಾಡು ಆ.17ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
‘ಮಲ್ಲಿಗೆದ ಸಾಲ್ ಸಾಲ್’ ಹಾಡಿಗೆ ಡಾ. ದೇವದಾಸ್ ಕಾಪಿಕಾಡ್ ಸಾಹಿತ್ಯ ಬರೆದಿದ್ದು, ಯುವ ಗಾಯಕ ಅಭಿಷೇಕ್ ಎಂ.ಆರ್. ಕಂಠದಲ್ಲಿ ಹಾಡು ಮೂಡಿಬಂದಿದೆ. ಕನ್ನಡದ ‘ಹೆಲೋ ಹೆಲೋ ನೀಲಾಂಬರಿ’ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದು, ಖ್ಯಾತ ಗಾಯಕ ಅರ್ಮಾನ್ ಮಲಿಕ್ ಧ್ವನಿ ನೀಡಿದ್ದಾರೆ. ಎರಡೂ ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ.
ಸೆ.18ರಂದು ‘ಟಾಸ್’ ತೆರೆಗೆ
ಅರ್ಜುನ್ ದೇವ್ ಆಕ್ಷನ್ ಕಟ್ ಹೇಳಿರುವ ‘ಟಾಸ್’ ಸಿನಿಮಾ ಸೆಪ್ಟೆಂಬರ್ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಡಾ. ದೇವದಾಸ್ ಕಾಪಿಕಾಡ್ ಅವರು ಸಿನಿಮಾಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಪಿ & ವೈ ವರ್ಲ್ಡ್ ಟೂರ್ ಎಲ್‌ಎಲ್‌ಪಿ ಸಂಸ್ಥೆ ಹಾಗೂ ಸಾಗರ್ ಪೂಜಾರಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ‘ಕೆಜಿಎಫ್’ ಖ್ಯಾತಿಯ ಗರುಡ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಹಲವು ಖ್ಯಾತ ಕಲಾವಿದರು ಚಿತ್ರದ ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಜೋಯಲ್ ಶಮನ್ ಡಿ’ಸೋಜಾ ಛಾಯಾಗ್ರಹಣ ಮಾಡಿದ್ದು, ಯಶ್ವಿನ್ ಕೆ. ಶೆಟ್ಟಿಗಾರ್ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ತುಳು ಹಾಗೂ ಕನ್ನಡ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮೂಡಿಬರುತ್ತಿರುವ ‘ಟಾಸ್’ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದ್ದು, ಹೊಸ ಹಾಡಿನ ಬಿಡುಗಡೆಯೊಂದಿಗೆ ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

