ಕನಸು ಕಂಡರೆ ಸಾಲದು, ಗುರಿಯತ್ತ ನಡೆಯಬೇಕು – ಶ್ರೀನಿವಾಸ್ ಎಂ.

0
69

ಕೈಕಂಬ : “ವಿದ್ಯಾರ್ಥಿಗಳು ನಮ್ಮ ಸಮಾಜದ ಭವಿಷ್ಯ. ಪ್ರತಿಯೊಬ್ಬರೂ ಜೀವನದಲ್ಲಿ ಸ್ಪಷ್ಟವಾದ ಗುರಿಯನ್ನು ಹೊಂದಿ, ಅದನ್ನು ತಲುಪುವವರೆಗೆ ನಿರಂತರ ಪರಿಶ್ರಮಿಸಬೇಕು. ಪರಿಶ್ರಮವನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಂಡಾಗ ಮಾತ್ರ ಕನಸನ್ನು ನನಸಾಗಿಸಲು ಸಾಧ್ಯ,” ಎಂದು ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್ ಎಂ. ಹೇಳಿದರು.

ಅವರು ಆ.9ರಂದು ಗುರುಪುರ ಕೈಕಂಬದ ಮುಂಡಾಲ ಸಮಾಜ (ರಿ.) ವತಿಯಿಂದ ಆಯೋಜಿಸಲಾದ ಆಟಿದ ಆಟ–ಊಟ–ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

“ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಕನಸು ಇರಬೇಕು. ಮೊಬೈಲ್, ಮನರಂಜನೆ ಹಾಗೂ ಅನಗತ್ಯ ವಿಚಾರಗಳಲ್ಲಿ ಸಮಯ ವ್ಯರ್ಥ ಮಾಡದೆ, ಭವಿಷ್ಯ ರೂಪಿಸಿಕೊಳ್ಳಲು ಪ್ರತಿದಿನ ಸ್ವಲ್ಪ ಸಮಯ ಮೀಸಲಿಡಬೇಕು. ಕನಸು ಕಂಡರೆ ಮಾತ್ರ ಸಾಲದು; ಅದನ್ನು ತಲುಪುವ ಗುರಿಯತ್ತ ಹೆಜ್ಜೆ ಇಡಬೇಕು,” ಎಂದು ಅವರು ಕರೆ ನೀಡಿದರು.
ಮೋನಪ್ಪ ಅದ್ಯಪಾಡಿ ಮಾತನಾಡಿ, ಸಮಾಜ ಬಾಂಧವರು ಏಕ ಮನಸ್ಸಿನಿಂದ ಒಗ್ಗಟ್ಟಾಗಬೇಕು. ಒಗ್ಗಟ್ಟಿನಿಂದ ಅಸಾಧ್ಯವೆನಿಸುವ ಕಾರ್ಯಗಳನ್ನೂ ಸಾಧ್ಯವಾಗಿಸಬಹುದು. ಸಂಘಟನೆಯ ಮೂಲಕ ಪರಸ್ಪರ ಸಹಕಾರ, ಶಿಸ್ತು ಹಾಗೂ ಸಾಮೂಹಿಕ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಶಿವಪ್ಪ ನಂತೂರು, ಕೇಶವ ಎನ್.ಎಂ.ಪಿ.ಟಿ., ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷ ರಘುವೀರ್ ಬಾಬುಗುಡ್ಡೆ, ಕೃಷ್ಣ ಕುಳಾಯಿ, ಸೀತಮ್ಮ ಪಡು ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ತ್ರಿಷಾ ಜಿ. ಅಮೀನ್, ಮನ್ವಿತ ಕೆ.ಎಸ್., ಲಾಲಿತ್ಯ ಎಲ್. ಕುಂದರ್, ಮೋಕ್ಷ ಬಿ., ಪ್ರತೀಕ್ಷಾ, ಚಿರಾಗ್ ಪಿ. ಹಾಗೂ ಧನ್ಯಶ್ರೀ ಅವರನ್ನು ಸನ್ಮಾನಿಸಲಾಯಿತು.

ಮುಂಡಾಲ ಸಮಾಜದ ಅಧ್ಯಕ್ಷ ಜಯಂತ ಕೊಳಂಬೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಠ್ಠಲ ಪೇಜಾವರ ಸ್ವಾಗತಿಸಿದರು. ಗುಲಾಬಿ ಬಡಕಬೈಲ್ ಪ್ರಾರ್ಥಿಸಿದರು. ನಯನಾ ಕಾರ್ಯಕ್ರಮ ನಿರೂಪಿಸಿದರು.