ಮುಂಬೈ : ಪತ್ನಿಯ ಮೇಲಿನ ಅನುಮಾನದಿಂದ ಮನೆಯ ಮೂಲೆ ಮೂಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ದಿನದ 24 ಗಂಟೆಯೂ ನಿಗಾ ವಹಿಸುತ್ತಿದ್ದ ವೈದ್ಯ ಪತಿಯ ವರ್ತನೆಯಿಂದ ಮಾನಸಿಕವಾಗಿ ನೊಂದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದ ಅಂಬರನಾಥ್‌ನಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ವೈದ್ಯನಾಗಿರುವ ಪತಿ ತನ್ನ ಪತ್ನಿಯ ನಡವಳಿಕೆ ಬಗ್ಗೆ ತೀವ್ರ ಅನುಮಾನ ಹೊಂದಿದ್ದು, ಆಕೆ ಮನೆಯಲ್ಲಿ ಯಾರೊಂದಿಗೆ ಮಾತನಾಡುತ್ತಾಳೆ, ಎಲ್ಲಿ ಓಡಾಡುತ್ತಾಳೆ ಹಾಗೂ ಏನು ಮಾಡುತ್ತಾಳೆ ಎಂಬುದನ್ನು ಗಮನಿಸಲು ಮನೆಯ ವಿವಿಧ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ ಎನ್ನಲಾಗಿದೆ.
ಅಷ್ಟೇ ಅಲ್ಲದೆ, ಕ್ಯಾಮೆರಾಗಳ ನೇರ ಪ್ರಸಾರವನ್ನು ತನ್ನ ಮೊಬೈಲ್‌ಗೆ ಸಂಪರ್ಕಿಸಿಕೊಂಡು ಆಸ್ಪತ್ರೆಯಲ್ಲಿದ್ದಾಗಲೂ ಪತ್ನಿಯ ಚಲನವಲನಗಳನ್ನು ನಿರಂತರವಾಗಿ ವೀಕ್ಷಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಗಂಡನ ಈ ವರ್ತನೆಯಿಂದ ಮಹಿಳೆ ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಒಳಗಾಗಿದ್ದು, ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಮಹಿಳೆಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ವೈದ್ಯ ಪತಿ ಹಾಗೂ ಆತನ ತಾಯಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

