ಪತ್ನಿಯ ಕತ್ತು ಸೀಳಿ ಕೊಲೆಗೈದ ಪತಿ..!

0
13

ಚಿಕ್ಕಬಳ್ಳಾಪುರ : ಪತ್ನಿಯ ಮೇಲಿನ ಅನುಮಾನದಿಂದ ಪತಿಯೊಬ್ಬ ತನ್ನ ಹೆಂಡತಿಯನ್ನೇ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ಸಮೀಪ ನಡೆದಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ತನ್ನ ಮಾವನಿಗೆ ಕರೆ ಮಾಡಿ ಮಗಳನ್ನು ಕೊಲೆ ಮಾಡಿರುವುದಾಗಿ ತಿಳಿಸಿ ಪರಾರಿಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಆಘಾತಕಾರಿ ತಿರುವು ನೀಡಿದೆ.

ಮೃತ ಮಹಿಳೆಯನ್ನು ಯೋಗಿಣಿ (23) ಎಂದು ಗುರುತಿಸಲಾಗಿದ್ದು, ಪತಿ ಗಣೇಶ್ ಕೊಲೆ ಆರೋಪಿಯಾಗಿದ್ದಾನೆ.

ಮಾಹಿತಿಯ ಪ್ರಕಾರ, ಯೋಗಿಣಿ ಬೇರೆ ವ್ಯಕ್ತಿಯ ಮೊಬೈಲ್ ಫೋನ್‌ನಿಂದ ತನ್ನ ಪತಿಗೆ ಕರೆ ಮಾಡಿದ್ದಳು ಎನ್ನಲಾಗಿದೆ. ಇದೇ ವಿಚಾರವಾಗಿ ಅನುಮಾನಗೊಂಡ ಗಣೇಶ್, ಪತ್ನಿಯೊಂದಿಗೆ ವಾಗ್ವಾದ ನಡೆಸಿದ್ದಾನೆ. ಮಾತಿನ ಚಕಮಕಿ ತೀವ್ರಗೊಂಡು, ಕೋಪ ಹಾಗೂ ಅನುಮಾನದ ಭರದಲ್ಲಿ ಗಣೇಶ್ ಪತ್ನಿಯ ಕತ್ತಿಗೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಕೃತ್ಯ ಎಸಗಿದ ಬಳಿಕ ಯೋಗಿಣಿಯ ತಂದೆಗೆ ಕರೆ ಮಾಡಿದ ಆರೋಪಿ, “ನಿಮ್ಮ ಮಗಳನ್ನು ಕೊಲೆ ಮಾಡಿದ್ದೇನೆ” ಎಂದು ಹೇಳಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಗಣೇಶ್ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here