ಬೇಸಿಗೆ ಮತ್ತು ಮಳೆಗಾಲದಲ್ಲಿ ಹೆಚ್ಚಾಗಿ ದೊರೆಯುವ ನೇರಳೆ ಹಣ್ಣು (ಜಾಮೂನ್/Black Plum) ತನ್ನ ವಿಶಿಷ್ಟ ರುಚಿಯ ಜೊತೆಗೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ, ನೇರಳೆ ಹಣ್ಣು ತಿಂದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಎಂಬ ನಂಬಿಕೆ ವರ್ಷಗಳಿಂದ ಜನರಲ್ಲಿ ಇದೆ. ಆದರೆ, ಇದು ಸಂಪೂರ್ಣ ಸತ್ಯವೇ? ಈ ಕುರಿತು ಆರೋಗ್ಯ ತಜ್ಞರು ಮಹತ್ವದ ಮಾಹಿತಿ ನೀಡಿದ್ದಾರೆ.
ಕೈಲಾಶ್ ದೀಪಕ್ ಆಸ್ಪತ್ರೆಯ ಎಂಡೋಕ್ರಿನಾಲಜಿ ತಜ್ಞ ಡಾ. ನಿಶಾಂತ್ ಜೈನ್ ಅವರ ಪ್ರಕಾರ, ನೇರಳೆ ಹಣ್ಣು ಮಧುಮೇಹಿಗಳಿಗೆ ಆರೋಗ್ಯಕರ ಆಹಾರದ ಭಾಗವಾಗಬಹುದು. ಆದರೆ, ಇದು ಮಧುಮೇಹಕ್ಕೆ ಔಷಧಿಯಲ್ಲ ಹಾಗೂ ವೈದ್ಯರು ಸೂಚಿಸಿದ ಔಷಧಿ ಅಥವಾ ಇನ್ಸುಲಿನ್‌ಗೆ ಪರ್ಯಾಯವೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನೇರಳೆ ಹಣ್ಣಿನಲ್ಲಿ ವಿಟಮಿನ್–ಸಿ, ಆಹಾರ ನಾರು (ಫೈಬರ್), ಪೊಟ್ಯಾಸಿಯಮ್, ಮೆಗ್ನೀಷಿಯಮ್, ಕಬ್ಬಿಣ, ಆಂಥೋಸಯಾನಿನ್, ಫ್ಲೇವನಾಯ್ಡ್ಸ್, ಎಲ್ಯಾಜಿಕ್ ಆಸಿಡ್ ಹಾಗೂ ಜ್ಯಾಂಬೋಲಿನ್ ಮೊದಲಾದ ಪೋಷಕಾಂಶಗಳು ಸಮೃದ್ಧವಾಗಿವೆ. ಇವು ಆಂಟಿಆಕ್ಸಿಡೆಂಟ್‌ಗಳಾಗಿ ಕಾರ್ಯನಿರ್ವಹಿಸಿ ದೇಹದ ಕೋಶಗಳನ್ನು ರಕ್ಷಿಸಲು ನೆರವಾಗುತ್ತವೆ.
ಕೆಲವು ಆರಂಭಿಕ ಅಧ್ಯಯನಗಳ ಪ್ರಕಾರ, ನೇರಳೆ ಹಣ್ಣಿನಲ್ಲಿರುವ ನೈಸರ್ಗಿಕ ಸಂಯುಕ್ತಗಳು ಆಹಾರದಲ್ಲಿನ ಪಿಷ್ಟವು ಸಕ್ಕರೆಯಾಗಿ ಪರಿವರ್ತನೆಯಾಗುವ ವೇಗವನ್ನು ನಿಧಾನಗೊಳಿಸಬಹುದು. ಜೊತೆಗೆ, ದೇಹದಲ್ಲಿ ಇನ್ಸುಲಿನ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗುವ ಸಾಧ್ಯತೆಯೂ ಇದೆ. ಇದರ ಗ್ಲೈಸೆಮಿಕ್ ಇಂಡೆಕ್ಸ್ (GI) ಕಡಿಮೆ ಹಾಗೂ ಫೈಬರ್ ಪ್ರಮಾಣ ಹೆಚ್ಚು ಇರುವುದರಿಂದ ಊಟದ ನಂತರ ರಕ್ತದಲ್ಲಿನ ಸಕ್ಕರೆ ತಕ್ಷಣ ಏರಿಕೆಯಾಗದಂತೆ ಸಹಾಯ ಮಾಡಬಹುದು. ಆದರೆ, ಈ ಪ್ರಯೋಜನಗಳನ್ನು ಖಚಿತಪಡಿಸಲು ಇನ್ನಷ್ಟು ದೊಡ್ಡ ಪ್ರಮಾಣದ ವೈಜ್ಞಾನಿಕ ಅಧ್ಯಯನಗಳ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.
ಆಯುರ್ವೇದ ಮತ್ತು ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ನೇರಳೆ ಹಣ್ಣಿನ ಬೀಜದ ಪುಡಿಯನ್ನು ಮಧುಮೇಹ ನಿಯಂತ್ರಣಕ್ಕೆ ಬಳಸಲಾಗುತ್ತದೆ. ಆದರೆ, ಇದನ್ನು ಬೆಂಬಲಿಸುವ ಬಲವಾದ ವೈಜ್ಞಾನಿಕ ಸಾಕ್ಷ್ಯಗಳು ಇನ್ನೂ ಲಭ್ಯವಿಲ್ಲ. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಇದನ್ನು ಔಷಧಿಯಂತೆ ಬಳಸಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಹೆಚ್ಚು ಪ್ರಮಾಣದಲ್ಲಿ ನೇರಳೆ ಹಣ್ಣು ಸೇವಿಸಿದರೆ ಮಲಬದ್ಧತೆ, ಹೊಟ್ಟೆ ಉಬ್ಬರ, ಅಜೀರ್ಣ ಹಾಗೂ ಹೊಟ್ಟೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮಧುಮೇಹಕ್ಕೆ ಈಗಾಗಲೇ ಔಷಧಿ ಅಥವಾ ಇನ್ಸುಲಿನ್ ಬಳಸುತ್ತಿರುವವರು ನೇರಳೆ ಹಣ್ಣನ್ನು ಮಿತವಾಗಿ ಸೇವಿಸಿ, ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ನೇರಳೆ ಹಣ್ಣು ತಿನ್ನಬಾರದು. ಹಾಲಿನೊಂದಿಗೆ ಅಥವಾ ಹಾಲು ಕುಡಿಯುವ ಮೊದಲು ಹಾಗೂ ತಕ್ಷಣದ ನಂತರವೂ ನೇರಳೆ ಹಣ್ಣು ಸೇವಿಸಬಾರದು. ಒಂದು ಬಾರಿ ಸುಮಾರು 8 ರಿಂದ 10 ನೇರಳೆ ಹಣ್ಣು (75–100 ಗ್ರಾಂ) ಸೇವಿಸುವುದು ಸಾಕಾಗುತ್ತದೆ.
ಮಧುಮೇಹ ನಿಯಂತ್ರಣಕ್ಕೆ ನೇರಳೆ ಹಣ್ಣು ಮಾತ್ರ ಸಾಕಾಗುವುದಿಲ್ಲ. ಸಮತೋಲನ ಆಹಾರ, ಪ್ರತಿದಿನ ವ್ಯಾಯಾಮ, ನಿಯಮಿತ ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ವೈದ್ಯರು ಸೂಚಿಸಿದ ಔಷಧಿಗಳನ್ನು ಸರಿಯಾಗಿ ಸೇವಿಸುವುದು ಹಾಗೂ ಆರೋಗ್ಯಕರ ಜೀವನಶೈಲಿ ಅನುಸರಿಸುವುದು ಅತ್ಯಗತ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಸೂಚನೆ: ಈ ಮಾಹಿತಿ ಆರೋಗ್ಯ ಜಾಗೃತಿಗಾಗಿ ಮಾತ್ರ. ಮಧುಮೇಹ ಅಥವಾ ಇತರ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಚಿಕಿತ್ಸೆಗಾಗಿ ವೈದ್ಯರ ಸಲಹೆಯನ್ನೇ ಅನುಸರಿಸಬೇಕು.

