ಉಪ್ಪಿನಂಗಡಿ : ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಉಪ್ಪಿನಂಗಡಿ ಪೊಲೀಸರು ಪತ್ತೆಹಚ್ಚಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಬುಧವಾರ ನಸುಕಿನ ಜಾವ ನಡೆದಿದೆ.
ಹಾಸನ ಮೂಲದ ಜಾವೇದ್ ಹಾಗೂ ಪರ್ವೀದ್ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಈಚರ್ ಲಾರಿಯಲ್ಲಿ 16 ಜಾನುವಾರುಗಳನ್ನು ತುಂಬಿಕೊಂಡು ಮಂಗಳೂರಿನತ್ತ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.

ಖಚಿತ ಮಾಹಿತಿ ಪಡೆದ ಉಪ್ಪಿನಂಗಡಿ ಪೊಲೀಸರು, ಪೊಲೀಸ್ ಠಾಣೆಯ ಉಪನಿರೀಕ್ಷಕ ಸುತೇಶ್ ಅವರ ನೇತೃತ್ವದಲ್ಲಿ 34 ನೆಕ್ಕಿಲಾಡಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದರು. ನಸುಕಿನ ಜಾವ ಲಾರಿಯನ್ನು ತಡೆದು ಪರಿಶೀಲಿಸಿದ ವೇಳೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಲಾರಿಯಲ್ಲಿದ್ದ 16 ಜಾನುವಾರುಗಳನ್ನು ವಶಕ್ಕೆ ಪಡೆದು ರಕ್ಷಣೆ ನೀಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ಲಾರಿಯಲ್ಲಿದ್ದ ಮತ್ತೋರ್ವ ವ್ಯಕ್ತಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

