ಎಸ್‌ಸಿಎಸ್ ಆಹ್ವಾನ್–2K26 ಸಮಾರೋಪ : ಡಾ. ನವೀನ್ ಶೆಟ್ಟಿ ಅವರಿಂದ ವಿಜೇತರಿಗೆ ಬಹುಮಾನ ವಿತರಣೆ

0
5

ಮಂಗಳೂರು : ಎಸ್‌ಸಿಎಸ್ ಪ್ರಥಮ ದರ್ಜೆ ಕಾಲೇಜು, ರಿವರ್‌ಸೈಡ್ ಕ್ಯಾಂಪಸ್, ಉರ್ವ, ಮಂಗಳೂರು ವತಿಯಿಂದ ಆಯೋಜಿಸಲಾದ ಅಂತರಕಾಲೇಜು ಪದವಿಪೂರ್ವ ಮಟ್ಟದ ಉತ್ಸವ ಎಸ್‌ಸಿಎಸ್ ಆಹ್ವಾನ್–2K26ರ ಸಮಾರೋಪ ಸಮಾರಂಭವು ಭಾನುವಾರ ಕಾಲೇಜಿನ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಉತ್ಸವದಲ್ಲಿ 18 ಕಾಲೇಜುಗಳಿಂದ 365 ವಿದ್ಯಾರ್ಥಿಗಳು ಭಾಗವಹಿಸಿ, ಕ್ರೀಡೆ, ಕಲೆ ಮತ್ತು ಡಿಜಿಟಲ್ ಸೃಜನಶೀಲತೆಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಸಂಘದ ಅಧ್ಯಕ್ಷರು ಹಾಗೂಷಎನ್‌ ಎಸ್‌ ಎ ಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಡಾ. ನವೀನ್ ಶೆಟ್ಟಿ ಅವರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿ, ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದರು.

ಯಾವುದೇ ಸಂಸ್ಥೆ ಅಥವಾ ಕಾರ್ಯಕ್ರಮದ ಬೆಳವಣಿಗೆಯ ಆರಂಭದಲ್ಲಿ ಸವಾಲುಗಳು ಎದುರಾಗುವುದು ಸಹಜ. ಆದರೆ ನಿರಂತರ ಪ್ರಯತ್ನ, ತಾಳ್ಮೆ ಮತ್ತು ದೃಢಸಂಕಲ್ಪದಿಂದ ಯಶಸ್ಸಿನ ಗುರಿಯನ್ನು ತಲುಪಬಹುದು ಎಂದು ಹೇಳಿದರು. ವಿವಿಧ ಕಾಲೇಜುಗಳಿಂದ ಆಗಮಿಸಿ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಅವರು, ಗೆಲುವು ಸಂತೋಷವನ್ನು ನೀಡಿದರೆ, ಅದರೊಂದಿಗೆ ಹೆಚ್ಚಿನ ಜವಾಬ್ದಾರಿಯೂ ಬರುತ್ತದೆ ಎಂದು ತಿಳಿಸಿದರು.

“ಗೆದ್ದರೂ ಸೋತರೂ ನಿಮ್ಮ ಉತ್ಸಾಹ ಕಡಿಮೆಯಾಗಬಾರದು. ಯಶಸ್ಸಿನ ಮೊದಲ ಹೆಜ್ಜೆಯೇ ಪ್ರಯತ್ನ. ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ತಾಳ್ಮೆ, ಆತ್ಮವಿಶ್ವಾಸ ಮತ್ತು ಜೀವನದ ಮೌಲ್ಯಗಳನ್ನು ಕಲಿಯಲು ಸಾಧ್ಯ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲುವುದಷ್ಟೇ ಮುಖ್ಯವಲ್ಲ; ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಮತ್ತು ಜನರ ಹೃದಯವನ್ನು ಗೆಲ್ಲುವುದೂ ಜೀವನದ ಮಹತ್ವದ ಸಾಧನೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ಪ್ರೀತಿ, ಸಹಕಾರ ಮತ್ತು ಮಾನವೀಯತೆಯ ಮಹತ್ವವನ್ನು ವಿವರಿಸಿದ ಅವರು, “ಬದುಕು ಎಂದರೆ ಕೇವಲ ಬದುಕುವುದಲ್ಲ, ಹಂಚಿಕೊಳ್ಳುವುದೂ ಹೌದು” ಎಂಬ ಸಂದೇಶವನ್ನು ಸಾರಿದರು. ನಾವು ಜಗತ್ತಿಗೆ ಪ್ರೀತಿಯನ್ನು ನೀಡಿದರೆ ಪ್ರೀತಿಯೇ ಮರಳಿ ಬರುತ್ತದೆ; ದ್ವೇಷವನ್ನು ಹಂಚಿದರೆ ದ್ವೇಷವೇ ಮರಳುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಪರಸ್ಪರ ಗೌರವ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇಂತಹ ಉತ್ಸವಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವುದರ ಜೊತೆಗೆ, ಅವರಲ್ಲಿ ನಾಯಕತ್ವ, ತಂಡದ ಮನೋಭಾವ ಮತ್ತು ಜೀವನವನ್ನು ಎದುರಿಸುವ ಧೈರ್ಯವನ್ನು ಬೆಳೆಸುತ್ತವೆ ಎಂದು ತಿಳಿಸಿದರು.

ಉತ್ಸವದ ಸಲಹೆಗಾರರಾದ ಎಂಡೋ ಪಾಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆಹ್ವಾನ್–2K26ರ ಯಶಸ್ಸಿಗಾಗಿ ಶ್ರಮಿಸಿದ ಆಯೋಜಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ತೆರೆಮರೆಯಲ್ಲಿ ಕಾರ್ಯನಿರ್ವಹಿಸಿದ ಎಲ್ಲರ ಕೊಡುಗೆಯನ್ನು ಸ್ಮರಿಸಿದರು. ಪ್ರತಿಯೊಂದು ಹಂತದಲ್ಲಿಯೂ ಸಂಸ್ಥೆಯ ಅಧ್ಯಕ್ಷರು ನೀಡಿದ ಪ್ರೋತ್ಸಾಹ ಮತ್ತು ಸಹಕಾರವು ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣವಾಯಿತು ಎಂದು ತಿಳಿಸಿದರು. “ನೀವು ಪ್ರಯತ್ನಿಸಿ, ನಿಮ್ಮೊಂದಿಗೆ ನಾನಿದ್ದೇನೆ” ಎಂಬ ಅಧ್ಯಕ್ಷರ ಭರವಸೆಯು ಆಯೋಜಕರು ಹಾಗೂ ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ನೀಡಿತು ಎಂದರು.

ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ರಜನೀಶ್ ಸೊರಕೆ, ಕಾಲೇಜಿನ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾಣ್, ಸಹೋದರ ಸಂಸ್ಥೆಯ ಎಸ್‌ಸಿಎಸ್ ರಿವರ್‌ಸೈಡ್ ಇಂಟರ್‌ನ್ಯಾಷನಲ್ ಅಕಾಡೆಮಿಯ ಪ್ರಾಂಶುಪಾಲರಾದ ಹೆಲೆನ್ ಲೋಬೊ, ಎಸ್‌ಸಿಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಾರಾಮ್ ರಾವ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ಸುಚಿತ್ರ ಪಿ. ಶೆಟ್ಟಿ ಅವರು ಉತ್ಸವದ ವರದಿಯನ್ನು ವಾಚಿಸಿದರು. ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು. ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಸಾನ್ವಿ ಸ್ವಾಗತಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಬಿಂದು ಕುಲಾಲ್ ವಂದಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ

ಉತ್ಸವದ ಅಂಗವಾಗಿ ನಿಧಿ ಶೋಧ, ಹಗ್ಗ ಜಗ್ಗಾಟ (ಬಾಲಕರ ಮತ್ತು ಬಾಲಕಿಯರ ವಿಭಾಗ), ಕಬಡ್ಡಿ, ರೀಲ್ ನಿರ್ಮಾಣ, ಪಾಡ್‌ಕಾಸ್ಟ್ ನಿರ್ಮಾಣ, ವ್ಲಾಗ್ ನಿರ್ಮಾಣ, ಫ್ಯೂಷನ್ ನೃತ್ಯ, ಫ್ಯಾಷನ್ ವಾಕ್ ಹಾಗೂ ಏಕವ್ಯಕ್ತಿ ಗಾಯನ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರತಿಯೊಂದು ಸ್ಪರ್ಧೆಯಲ್ಲಿಯೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ ವಿಜೇತರನ್ನು ಗೌರವಿಸಲಾಯಿತು. ಸ್ಪರ್ಧಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆ, ಸೃಜನಶೀಲತೆ ಮತ್ತು ಕೌಶಲವನ್ನು ಪ್ರದರ್ಶಿಸಿದರು.

ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ, ತಂಡದ ಸಹಕಾರ, ಕ್ರೀಡಾಸ್ಫೂರ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶ ಹೊಂದಿದ್ದ ಆಹ್ವಾನ್–2K26, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ಸ್ನೇಹ ಮತ್ತು ಸೌಹಾರ್ದತೆಯನ್ನು ಬೆಸೆಯುವ ವೇದಿಕೆಯಾಯಿತು. ಆಯೋಜಕರ ಪರಿಶ್ರಮ, ಉಪನ್ಯಾಸಕರ ಸಹಕಾರ, ಆಡಳಿತ ಮಂಡಳಿಯ ಪ್ರೋತ್ಸಾಹ ಹಾಗೂ ವಿದ್ಯಾರ್ಥಿಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯೊಂದಿಗೆ ಉತ್ಸವ ಯಶಸ್ವಿಯಾಗಿ ಸಮಾರೋಪಗೊಂಡಿತು.