ಮೊದಲ ತುಳು ನಾಟಕ ಕೃತಿಯ ಕರ್ತೃ ಮಾಧವ ತಿಂಗಳಾಯರ ಸ್ಮರಣೆ

0
55

ಮಂಗಳೂರು : ಜನಸಾಮಾನ್ಯರಿಗೆ ಸಾಮಾಜಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ನಾಟಕ ಕಲೆಯನ್ನು ಪರಿಣಾಮಕಾರಿಯಾಗಿ ಬಳಸಿದ ಮಾಧವ ತಿಂಗಳಾಯರ  ‘ಜನಮರ್ಲ್’ ನಾಟಕವು ತುಳು ಭಾಷೆಯ ಮೊದಲ ಪ್ರಕಟಿತ ನಾಟಕವಾಗಿದ್ದು ಐತಿಹಾಸಿಕ ಮಹತ್ವವನ್ನು ಹೊಂದಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ  ಅಧ್ಯಕ್ಷ  ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು..

 ಅವರು ಸಂಕೇತ ಮಂಗಳೂರು ಮತ್ತು ಸಿಂಗಾರ ಸುರತ್ಕಲ್ ಸಹಯೋಗದಲ್ಲಿ ಮಂಗಳೂರಿನ ಹೊಯಿಗೆಬಜಾರಿನಲ್ಲಿ  ಮಾಧವ ತಿಂಗಳಾಯರ ಮನೆಯಲ್ಲಿ ನಡೆದ ತಿಂಗಳಾಯರ ಜನ್ಮ ದಿನದ ನೆನಪು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮಾಧವ ತಿಂಗಳಾಯರು ನಾಟಕ ರಂಗದಲ್ಲಿ ಮಾಡಿದ ಸಾಧನೆಯನ್ನು     ಯುವ ಜನತೆಗೆ ಪರಿಚಯಿಸುವ ಮೂಲಕ ತುಳುನಾಡಿನ ನಾಟಕದ ಚರಿತ್ರೆಯನ್ನು ಸ್ಮರಿಸುವ  ಕೆಲಸ ನಡೆಯಬೇಕಾಗಿದೆ. ಇದೆ ವೇಳೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾಗಿದ್ದ  ತಿಂಗಳಾಯರ ಮೂಲ ಮನೆ ಇಂದಿರಾ ಭವನ ಮತ್ತು  ಮಹಾತ್ಮ ಗಾಂಧೀಜಿ ಅವರು ಸಭೆ ನಡೆಸಿದ್ದ ಶ್ರೀ ಜ್ಞಾನೋದಯ ಸಭಾ ಭವನವನ್ನು  ಸಂರಕ್ಷಿಸುವ ಬಗ್ಗೆ ಚಿಂತಿಸಬೇಕಾಗಿದೆ ಎಂದು ತಾರಾನಾಥ್  ಗಟ್ಟಿ ಅವರು ಅಭಿಪ್ರಾಯಪಟ್ಟರು.

 ಮಾಧವ ತಿಂಗಳಾಯರ ಅಳಿಯ ಹಾಗೂ ಸಾಹಿತಿ ಪ್ರೇಮಚಂದ್ರ ಕೆ. ತಿಂಗಳಾಯ ಮಾತನಾಡಿ, ಹಿರಿಯ ಸಮಾಜ ಸುಧಾರಕ ಮೋಹನಪ್ಪ ತಿಂಗಳಾಯ, ಕೃಷ್ಣಪ್ಪ ತಿಂಗಳಾಯ ಮತ್ತು ಮಾಧವ ತಿಂಗಳಾಯರು  ಶ್ರೀ ಜ್ಞಾನೋದಯ ಸಮಾಜ ದ ಮೂಲಕ ಸಾಮಾಜಿಕ ಪರಿವರ್ತನೆಗಾಗಿ ಮಾಡಿದ ಕಾರ್ಯಗಳು ಅನನ್ಯವಾದವುಗಳು ಎಂದರು.

  ಸಿಂಗಾರ ಸುರತ್ಕಲ್ ನ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ , ಮಾಧವ ತಿಂಗಳಾಯರು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಬರೆದ ನಾಟಕಗಳು  ಸಾಮಾಜಿಕ ಬದುಕಿನ ವಿಮರ್ಶೆ ಮಾಡುವ ಹಾಗೂ ಪ್ರಚಾರಕ ಪ್ರಜ್ಞೆಯನ್ನು ರೂಪಿಸಿದ ರಂಗಭೂಮಿಯಲ್ಲಿ ಯಶಸ್ಸು ಕಂಡ ನಾಟಕ ಗಳಾಗಿವೆ ಎಂದರು.

 ಸಂಕೇತ ಮಂಗಳೂರಿನ ಸಂಚಾಲಕ ಮತ್ತು ಕಲಾವಿದ ಜಗನ್ ಪವಾರ್ ಬೇಕಲ್ ಮಾತನಾಡಿ, ಸ್ವಾತಂತ್ರ್ಯ ಹೋರಾಟ ಗಾರರಾಗಿದ್ದ  ಮಾಧವ ತಿಂಗಳಾಯರು ಯುವ ಜನತೆಗೆ ಸ್ಫೂರ್ತಿ ಯಾಗಿದ್ದರು. ಅವರ ನೆನಪು ಸದಾ ಉಳಿಯುವ ಕಾರ್ಯ ನಡೆಯ ಬೇಕು ಎಂದರು. ಇಂಟಾಕ್ ಮಂಗಳೂರು ಚಾಪ್ಟರ್ ನ ಸಂಯೋಜಕ ಸುಭಾಸ್ ಬಸು, ಸ್ವಾತಂತ್ರ್ಯ ಹೋರಾಟ ಗಾರ ರ ಸ್ಮರಣೆ ಗಳನ್ನು ರಚನಾತ್ಮಕ ವಾಗಿ ಮಾಡಬೇಕು ಎಂದರು.  ಮಾಧವ  ತಿಂಗಳಾಯರ ಅಳಿಯ ಹಾಗೂ ಸಮಾಜ ಸೇವಕರಾಗಿದ್ದ  ಪ್ರಫುಲ್ಲಚಂದ್ರ ತಿಂಗಳಾಯ, ಸಂಕೇತ ಮಂಗಳೂರಿನ ಅಧ್ಯಕ್ಷ ಹರೀಶ್, ಕಲಾವಿದ ರಾಜೇಂದ್ರ ಕೇದಿಗೆ ಉಪಸ್ಥಿತರಿದ್ದರು.              

LEAVE A REPLY

Please enter your comment!
Please enter your name here