ಮಂಗಳೂರು:ರಂಗಕಲೆಯ ಅಭ್ಯಾಸವು ಪರೋಕ್ಷವಾಗಿ ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗುವುದರಿಂದ ಈ ಬಗ್ಗೆ ಎಳೆಯ ಮಕ್ಕಳಿಗೆ ತರಬೇತಿ ನೀಡುವುದು ಶಾಲಾ ದೀರ್ಘಾವಧಿ ರಜೆಯ ಅತ್ಯುತ್ತಮ ಸದ್ಬಳಕೆಯೆನಿಸುತ್ತದೆ ಯೆಂದು ಸಿ ಎ ನಂದಗೋಪಾಲ ಶೆಣೈಯವರು ಅಭಿಪ್ರಾಯ ಪಟ್ಟರು. ಐದರ ಹರಯದ ಪುಟಾಣಿ ಪ್ರತಿಭೆ ಬಂಟ್ವಾಳದ ಮಾಸ್ಟರ್ ಅಂಕುಶ್, ತನ್ನ ನಿರರ್ಗಳ ಶ್ಲೋಕಪಠಣೆಯೊಂದಿಗೆ ದೀಪ ಪ್ರಜ್ವಲನೆ ಮಾಡಿ ಶಿಬಿರದ ಸಾಂಕೇತಿಕ ಉದ್ಘಾಟನೆ ನಡೆಸಿದನು. ಬಳಿಕ ಸಂದೇಶ ನೀಡಿದ ಅಧ್ಯಕ್ಷ ಶೆಣೈಯವರು ವಿಶ್ವ ಕೊಂಕಣಿ ಕೇಂದ್ರದಲ್ಲಿ ನಾಟಕ ಕ್ಷೇತ್ರಕ್ಕೆ ಸಂಬಂಧಿಸಿ ಮುಂದೆ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ವಿಶ್ವಕೊಂಕಣಿ ಕೇಂದ್ರದ ಉಪಾಧ್ಯಕ್ಷ ರಮೇಶ್ ನಾಯಕ್, ಕಾರ್ಯದರ್ಶಿ ಡಾ. ಮೋಹನ್ ಪೈ, ಕೋಶಾಧಿಕಾರಿ ಬಿ ಆರ್ ಭಟ್, ಉಷಾ ಎನ್ ಶೆಣೈ, ಆದ್ಯಾ ಭಟ್, ಉಷಾ ಎಮ್ ಪೈ, ಸುಚಿತ್ರಾ ನಾಯಕ್, ಸಿಎಒ ಡಾ ಬಿ ದೇವದಾಸ ಪೈ ಉಪಸ್ಥಿತರಿದ್ದರು. ಮುಖ್ಯ ತರಬೇತುದಾರ ಪ್ರಕಾಶ್ ಶೆಣೈ ಶಿಬಿರದ ಸಂಕ್ಷಿಪ್ತ ವಿವರ ನೀಡಿದರು. ಜಗನ್ ಪವಾರ್, ನಾಗೇಶ್ ಪ್ರಭು, ಪ್ರಕಾಶ್ ನಾಯಕ್, ವೃಂದಾ ನಾಯಕ್, ಭಾವನಾ ಪ್ರಭು, ಸುಚಿತ್ರಾ ಶೆಣೈ ಇವರೆಲ್ಲರೂ ವಿವಿಧ ಚಟುವಟಿಕೆಗಳ ತರಬೇತು ನೀಡಲಿದ್ದಾರೆ. ಈ ವಿಶೇಷ ಶಿಬಿರದಲ್ಲಿ ಭಾಗವಹಿಸುವ ಸುಮಾರು 60 ಶಾಲಾ ಮಕ್ಕಳು ಉಚಿತ ಊಟೋಪಚಾರ, ವಸತಿ ಸೌಲಭ್ಯದೊಂದಿಗೆ ರಂಗ ಚಟುವಟಿಕೆ, ಮೇಕಪ್, ವಿಭಿನ್ನ ರಂಗ ನೃತ್ಯ, ಹಾಡು, ಕೋಲಾಟ, ಇತ್ಯಾದಿ ತರಬೇತಿ ಪಡೆಯುತ್ತಿದ್ದಾರೆ. ಮೂರು ದಿನದ ಈ ತರಬೇತಿಯ ವೆಚ್ಚವನ್ನು ವರ್ಧನಿ ಸಂಘಟನೆಯು ಪ್ರಾಯೋಜಿಸುತ್ತಿದೆ.