ಮಂಚದಿಂದ ಬಿದ್ದು ಸಾವು ಎಂದಿದ್ದರು : ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ರಹಸ್ಯ ಬಯಲು

0
9

ಬೆಂಗಳೂರು : ನಗರದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 11 ತಿಂಗಳ ಹೆಣ್ಣು ಮಗುವಿನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ಬೆಳವಣಿಗೆ ಬೆಳಕಿಗೆ ಬಂದಿದೆ. ಆರಂಭದಲ್ಲಿ ಮಗು ಮಂಚದಿಂದ ಬಿದ್ದು ಮೃತಪಟ್ಟಿದೆ ಎಂದು ಹೇಳಲಾಗಿದ್ದರೂ, ಮರಣೋತ್ತರ ಪರೀಕ್ಷೆ ಮತ್ತು ಪೊಲೀಸ್ ತನಿಖೆಯಲ್ಲಿ ಮಗುವನ್ನು ತಂದೆ-ತಾಯಿಯೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತಂದೆಯನ್ನು ಬಂಧಿಸಲಾಗಿದೆ.

ಬಂಧಿತನನ್ನು ಯಾದಗಿರಿ ಮೂಲದ ಶೇಖಪ್ಪ (22) ಎಂದು ಗುರುತಿಸಲಾಗಿದೆ. ಪತ್ನಿ ವಿಜಯಲಕ್ಷ್ಮೀ ತಲೆಮರೆಸಿಕೊಂಡಿದ್ದು, ಆಕೆಯ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಜೂನ್ 9ರಂದು ಕಿತಗನೂರು ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ದಂಪತಿ ತಮ್ಮ 11 ತಿಂಗಳ ಹೆಣ್ಣು ಮಗು ಮೃತಪಟ್ಟಿರುವ ಬಗ್ಗೆ ಮಂಚದಿಂದ ಬಿದ್ದು ಸಾವನ್ನಪ್ಪಿದೆ ಎಂದು ಹೇಳಿ ಪ್ರಕರಣವನ್ನು ಸಹಜ ಸಾವಿನಂತೆ ಬಿಂಬಿಸಲು ಯತ್ನಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ದೇಹದ ಮೇಲಿನ ಗಂಭೀರ ಗಾಯಗಳು ಹಾಗೂ ಆಂತರಿಕ ಅಂಗಗಳಿಗೆ ಹಾನಿಯಾಗಿರುವುದು ಪತ್ತೆಯಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿ ನಡುವೆ ನಡೆದ ಕೌಟುಂಬಿಕ ಕಲಹದ ವೇಳೆ ಮಗು ಅಳುತ್ತಿದ್ದುದರಿಂದ ಕೋಪಗೊಂಡ ತಾಯಿ ಮಗುವಿಗೆ ಕಾಲಿನಿಂದ ಒದ್ದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ತಂದೆ ಮಗುವನ್ನು ಶೆಡ್‌ನಿಂದ ಹೊರಗೆ ಎಸೆದಿರುವ ಶಂಕೆಯೂ ತನಿಖೆಯಲ್ಲಿ ವ್ಯಕ್ತವಾಗಿದೆ. ಈ ಘಟನೆಯ ಬಳಿಕ ಮಗು ಮಂಚದಿಂದ ಬಿದ್ದು ಮೃತಪಟ್ಟಿದೆ ಎಂದು ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ದೇಹದಲ್ಲಿ ಗಂಭೀರ ಗಾಯಗಳು, ಆಂತರಿಕ ರಕ್ತಸ್ರಾವ, ಮೂಳೆ ಮುರಿತ ಹಾಗೂ ಹಲವು ಅಂಗಗಳಿಗೆ ಹಾನಿಯಾಗಿರುವುದು ದೃಢಪಟ್ಟಿದೆ. ಇದರಿಂದ ಇದು ಸಹಜ ಸಾವು ಅಲ್ಲ ಎಂಬುದು ಸ್ಪಷ್ಟವಾಗಿದೆ.

ಪ್ರಕರಣದ ತನಿಖೆ ವೇಳೆ ದಂಪತಿಯ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯಗಳು ಮತ್ತು ಕೌಟುಂಬಿಕ ಕಲಹಗಳು ನಡೆಯುತ್ತಿದ್ದ ಮಾಹಿತಿ ಕೂಡ ಲಭ್ಯವಾಗಿದೆ. ಈ ಎಲ್ಲ ಆಯಾಮಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಾರಿಯಾಗಿರುವ ತಾಯಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here