ಕೊಪ್ಪ : ತಾಲ್ಲೂಕಿನ ಗಡಿಕಲ್ ಚೆಕ್‌ಪೋಸ್ಟ್ ಬಳಿ ಅಕ್ರಮವಾಗಿ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಇನ್ನೋವಾ ಕಾರನ್ನು ಕೊಪ್ಪ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಜಪ್ತಿ ಮಾಡಿದ ಘಟನೆ ಮಂಗಳವಾರ ನಡೆದಿದೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ವಾಹನವನ್ನು ತಡೆಹಿಡಿಯಲು ಮುಂದಾದಾಗ, ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ವಾಹನವನ್ನು ಬೆನ್ನಟ್ಟಿ ಕಾರ್ಯಾಚರಣೆ ನಡೆಸಿದರು.
ಪೊಲೀಸರ ಬೆನ್ನಟ್ಟುವಿಕೆ ತೀವ್ರವಾಗುತ್ತಿದ್ದಂತೆ, ಆರೋಪಿಗಳು ಕಾರನ್ನು ರಸ್ತೆಯಲ್ಲೇ ಬಿಟ್ಟು ಕತ್ತಲಿನ ಸದುಪಯೋಗ ಪಡೆದು ಪರಾರಿಯಾಗಿದ್ದಾರೆ. ಪರಿಶೀಲನೆ ನಡೆಸಿದಾಗ, ವಾಹನದ ನಂಬರ್ ಪ್ಲೇಟ್‌ನ್ನು ತೆಗೆದು ಹಾಕಲಾಗಿದ್ದು, ಅದರೊಳಗೆ ಎರಡು ಗೋವುಗಳನ್ನು ಹಿಂಸಾತ್ಮಕವಾಗಿ ತುಂಬಿ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.
ಪೊಲೀಸರು ಕೂಡಲೇ ಗೋವುಗಳನ್ನು ಸುರಕ್ಷಿತವಾಗಿ ರಕ್ಷಿಸಿ, ಇನ್ನೋವಾ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಪ್ತಿಯಾದ ವಾಹನದ ವಿವರಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ವಿಶೇಷ ತನಿಖೆ ಆರಂಭಿಸಲಾಗಿದ್ದು, ಅಕ್ರಮ ಗೋ ಸಾಗಣೆ ಜಾಲದ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಮೂಕಪ್ರಾಣಿಗಳ ಜೀವ ಉಳಿಸಿದ ಕೊಪ್ಪ ಪೊಲೀಸ್ ತಂಡದ ಕರ್ತವ್ಯನಿಷ್ಠೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಗೋವು ಕಳ್ಳತನ ಹಾಗೂ ಅಕ್ರಮ ಗೋ ಸಾಗಣೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಿ ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

